

ದೇವನಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು, ಪ್ರಾಂತ ರೈತ ಸಂಘದ ಸಹಕಾರದಲ್ಲಿ ಪಟ್ಟಣದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನಾ ಮೆರವಣಿಗೆ ನಡೆಸಿ, ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದಿಂದ ವರ್ಷದಿಂದ ವರ್ಷಕ್ಕೆ ಅನುದಾನ ಕಡಿತ ಮಾಡಲಾಗುತ್ತಿದೆ. ಇದನ್ನು ಹೆಚ್ಚಳ ಮಾಡಬೇಕು. ಕರೊನಾ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಮುಂತಾದ ಸೌಕರ್ಯ ಕೊಡುತ್ತಿಲ್ಲ ಎಂದು ಸಂಘಟನೆಯ ಅಧ್ಯಕ್ಷೆ ಎಚ್.ಪುಷ್ಪಾವತಮ್ಮ ದೂರಿದರು.
ಪ್ರತಿ ತಿಂಗಳು 10 ಸಾವಿರ ರೂ. ಹೆಚ್ಚುವರಿ ಗೌರವಧನ ನೀಡಬೇಕು. ಕರೊನಾ ಕರ್ತವ್ಯದಲ್ಲಿ ಯಾವುದೇ ಕಾಯಿಲೆಗೆ ತುತ್ತಾದರೂ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಮೃತಪಟ್ಟರೆ 30 ಲಕ್ಷ ರೂ. ವಿಮೆ ಹಣ ನೀಡಬೇಕು ಎಂದರು.
ಬೇಡಿಕೆ ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಆ.10ರಂದು ಜೈಲ್ ಬರೋ ಚಳವಳಿ ನಡೆಸಲು ಸಿಐಟಿಯು ತೀರ್ಮಾನಿಸಿದೆ ಎಂದರು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎನ್.ವೀರಣ್ಣ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಖಜಾಂಚಿ ಅನಸೂಯಾ, ಪದಾಧಿಕಾರಿಗಲಾದ ಲಕ್ಷ್ಮೀ, ವೆಂಕಟಲಕ್ಷ್ಮೀ, ಆಶಾ, ರೂಪಾ, ರಾಜೇಶ್ವರಿ ಮುಂತಾದವರು ಭಾಗವಹಿಸಿದ್ದರು.