ಸಮರ್ಪಕವಾಗಿ ನೀರು ವಿತರಿಸಲು ಒತ್ತಾಯ

22 CHN
Published on

ಚನ್ನಗಿರಿ: ತಾಲೂಕಿನ ಅರಳಿಕಟ್ಟೆ ಗ್ರಾಮಕ್ಕೆ ಗ್ರಾಪಂನಿಂದ ಸಮರ್ಪಕವಾಗಿ ಕುಡಿಯುವ ನೀರು ವಿತರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖಂಡ ಜಕಲಿ ನಾಗರಾಜ್ ಮಾತನಾಡಿ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತದೆ ಎಂಬುದನ್ನು ತಿಳಿದು ಮುಂಜಾಗ್ರತೆಯಾಗಿ ಗ್ರಾಪಂ ಅವರು ಸಿದ್ಧತೆ ಮಾಡಿಕೊಳ್ಳಬೇಕು. ಆದರೆ ಅಧಿಕಾರಿಗಳ ನಿರ್ಲಕ್ಷ್ಯಂದ ಗ್ರಾಮದಲ್ಲಿ ಕುಡಿಯಲು ನೀರು ಇಲ್ಲದಂತಾಗಿದೆ. 15 ದಿನಗಳಿಗೆ ಒಂದು ಬಾರಿ ಮಾತ್ರ ನೀರನ್ನು ವಿತರಣೆಯಾಗುತ್ತಿದೆ ಎಂದರು.

ಗ್ರಾಮದಲ್ಲಿ ಜಲ್ ಜೀವನ್ ಯೋಜನೆಯಡಿ ಪ್ರತಿಮನೆಗೆ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸಿದ್ದು, ಅದಕ್ಕೆ ಬಳಸಿದ ಸಾಮಗ್ರಿಗಳು ಕಳಪೆಯಾಗಿವೆ. ನಲ್ಲಿಗಳಲ್ಲಿ ಇದುವರೆಗೂ ಒಂದುಹನಿ ನೀರು ಬಂದಿಲ್ಲ. ಹೆಸರಿಗೆ ಮಾತ್ರ ಗ್ರಾಮದ ಎಲ್ಲ ಮನೆಗಳ ಮುಂದೆ ನಲ್ಲಿಗಳನ್ನು ಹಾಕಿಸಿ ಜೆಜೆಎಂ ಎಂದು ಬೋರ್ಡ್ ಹಾಕಿದ್ದಾರೆ. ಇದು ಸರ್ಕಾರದ ಹಣವನ್ನು ಲಪಟಾಯಿಸುವ ಕಾರ್ಯಕ್ರಮವಾಗಿದೆ. ಬೇಸಿಗೆ ಕಾಲ ಪ್ರಾರಂಭದ ದಿನಗಳಲ್ಲಿಯೇ ಈ ಸ್ಥಿತಿ ನಿರ್ವಣವಾದರೆ ಮುಂದಿನ ದಿನಗಳಲ್ಲಿ ನಮ್ಮ ಗತಿ ಏನು ಎಂದು ಪ್ರಶ್ನಿಸಿದರು.

ಏಪ್ರಿಲ್​ನಿಂದ ಜೂನ್​ವರೆಗೆ ಬಿಸಿಲಿನ ತಾಪ ಹೆಚ್ಚಾಗಲಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿದ್ದರೆ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಗ್ರಾಮದ ಮಹಿಳೆ ರತ್ನಮ್ಮ ಮಾತನಾಡಿ, ಕುಡಿಯುವ ನೀರು ವಿತರಣೆಯಾಗದೆ ಬೇರೆಡೆಯಿಂದ ನೀರು ತಂದು ಬದುಕುತ್ತಿದ್ದೇವೆ. ತೋಟದ ಮಾಲೀಕರು ನೀರು ನೀಡುತ್ತಿಲ್ಲ, ಪ್ರತಿದಿನ ನೀರಿಗಾಗಿ ಹೋರಾಟ ನಡೆಸುವ ಪರಿಸ್ಥಿತಿ ನಿರ್ವಣವಾಗಿದೆ ಎಂದರು.

ಶಿವಮೂರ್ತಿ, ಮೀನಾಕ್ಷಿ, ಪದ್ಮಾವತಿ, ದೇವಿರಮ್ಮ, ಬಾಬಣ್ಣ, ಶಾರದಮ್ಮ, ವಿಶಾಲಾಕ್ಷಮ್ಮ, ಮಂಜುಳಾ, ರೇಣುಕಮ್ಮ, ಶಾಂತಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net