ದಸರಾ ಕ್ರೀಡಾಕೂಟ ಕ್ರೀಡಾಂಗಣದ ಬಳಿ ಪ್ರತಿಭಟನೆ, ಶಾಸಕ ಶಿವಣ್ಣನವರಗೆ ಘೇರಾವ್ ಹಾಕಲು ಬಂದಿದ್ದ ರೈತರು

15 BYD1
Published on

ಬ್ಯಾಡಗಿ: ಇಲ್ಲಿನ ದಸರಾ ಕ್ರೀಡಾಕೂಟ ಉದ್ಘಾಟನೆಗೆ ಶಾಸಕ ಬಸವರಾಜ ಶಿವಣ್ಣನವರ ಆಗಮಿಸುವ ಸುದ್ದಿ ತಿಳಿದ ತಾಲೂಕು ರೈತ ಸಂಘದ ಕಾರ್ಯಕರ್ತರು ಅವರಿಗೆ ಘೇರಾವ್ ಹಾಕಲು ತಯಾರಿ ನಡೆಸಿದ್ದರು. ಆದರೆ, ಕಾರ್ಯಕ್ರಮದಿಂದ ಶಾಸಕರು ದೂರ ಉಳಿದ ಕಾರಣ ರೈತರು ಕೆಲಕಾಲ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬರಗಾಲ ಪಟ್ಟಿಯಿಂದ ಬ್ಯಾಡಗಿ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ರೈತರಿಗೆ ಅನ್ಯಾಯವಾಗಿದೆ. ಬರಗಾಲ ಪಟ್ಟಿಯಲ್ಲಿ ಬ್ಯಾಡಗಿ ತಾಲೂಕು ಸೇರ್ಪಡೆಯಾಗಬೇಕು. ಪರಿಹಾರವನ್ನು ಹೆಕ್ಟೇರ್​ಗೆ 25 ಸಾ.ರೂ. ಏರಿಕೆ ಮಾಡಬೇಕು. ಅಲ್ಲಿಯವರೆಗೂ ಸ್ಥಳೀಯ ಶಾಸಕರು ಹಾಗೂ ಚುನಾಯಿತ ಜನಪ್ರತಿನಿಧಿಗಳ ಎಲ್ಲ ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ ತೆರಳಿ ಅಡ್ಡಿಪಡಿಸುವ ಮೂಲಕ ಧಿಕ್ಕಾರ ಕೂಗುವುದಾಗಿ ಸ್ಪಷ್ಟಪಡಿಸಿದರು.
ವಾಪಸ್ ತೆರಳಿದ ಎಸ್​ಆರ್​ಪಿ; ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ ರೈತರ ಮನವಿಗೆ ಸ್ಪಂದಿಸಿದರು. ತಾಲೂಕಿನ ರೈತರ ನೋವು ನನಗೂ ಅರ್ಥವಾಗಲಿದೆ. ಮುಖ್ಯಮಂತ್ರಿ, ಕೃಷಿ ಸಚಿವರಿಗೆ ಸ್ಥಳೀಯ ವಾಸ್ತವವನ್ನು ಮನವರಿಕೆ ಮಾಡುವುದಾಗಿ ತಿಳಿಸಿ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿದರು.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ರುದ್ರಗೌಡ್ರ ಕಾಡನಗೌಡ್ರ, ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ, ಮಲ್ಲೇಶಪ್ಪ ಡಂಬಳ, ಬಸವರಾಜ ಸಂಕಣ್ಣನವರ, ಜಾನ ಪುನೀತ್, ನಂಜುಂಡಯ್ಯ ಹಾವೇರಿ ಮಠ, ಶೇಖಪ್ಪ ಕಾಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net