ನಗರಸಭೆ ಚುನಾವಣೆ ವಿಳಂಬ! ಬಿಜೆಪಿ ಪ್ರತಿಭಟನೆ

05GDG04
Published on
ಗದಗ: ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವಿಳಂಬ ಹಿನ್ನೆಲೆ ನಗರದ ಉಪವಿಭಾಗಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಸದಸ್ಯರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದ್ದಲ್ಲದೇ, ಚುನಾವಣಾಧಿಕಾರಿ ಎಸಿ ಸರಿಯಾಗಿ ಸ್ಪಂದಿಸುತ್ತಿಲ್ಲ, ಒಂದು ರಾಜಕೀಯ ಪಕ್ಷಕ್ಕೆ ಅಂಟಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.
 ಎಸಿ ಕಚೇರಿಯಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಅವರ ಕಚೇರಿ ಎದುರು  ಪ್ರತಿಭಟನೆ ಕುಳಿತರು. ಈ ವೇಳೆ ಪ್ರತಿಭಟನೆ ನಡೆಸಿ ಆದರೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರು ಇದಕ್ಕೆ ಒಪ್ಪದೇ ಅವರು ಪ್ರತಿಭಟನೆ ಮುಂದುವರಿಸುತ್ತಿದ್ದಂತೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಅದನ್ನು ವಿಡಿಯೋ ಮಾಡಿ ಎಂದು ಹಿರಿಯ ಅಧಿಕಾರಿಗಳು ಸೂಚಿಸಿದರು.
  ಇದರಿಂದ ತೀವ್ರ ಕುಪಿತಗೊಂಡ ಬಿಜೆಪಿ ಸದಸ್ಯರು ನಾವು ಯಾವುದೇ ರೀತಿಯ ಕಾನೂನು ಬಾಹಿರ ಕೆಲಸ ಮಾಡಿಲ್ಲ, ನಮ್ಮ ಹಕ್ಕನ್ನು ನಮಗೆ ಕೊಟ್ಟಿದ್ದರೆ ನಾವ್ಯಾಕೆ ಇಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತ ಪಡಿಸಿ, ಎಸಿ ಕಚೇರಿಯಿಂದ ಹೊರ ಬಂದು ಕಚೇರಿ ಮುಂಭಾಗದಲ್ಲಿರುವ ಹೆದ್ದಾರಿಯಲ್ಲಿ ಧಿಡೀರನೆ ಪ್ರತಿಭಟನೆಗೆ ಮುಂದಾದರು. ಇದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
  ಈ ವೇಳೆ ರಸ್ತೆ ತೆರವು ಮಾಡುವಂತೆ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಹಲವಾರು ಬಾರಿ ಪ್ರಯತ್ನಿಸಿದರೂ ಅದಕ್ಕೆ ಒಪ್ಪದೇ 20 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ನಂತರ ಡಿಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಚೇರಿ ಮುಂದೆ ನೀವು ಪ್ರತಿಭಟನೆ ಮಾಡಿ, ಆದರೆ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡಬೇಡಿ ಎಂದು ವಿನಂತಿಸಿದ ನಂತರ ಅಲ್ಲಿಂದ ಮತ್ತೆ ಎಸಿ ಕಚೇರಿ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.
  ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಹೋರಾಟಗಾರರ ಮನವೊಲಿಸಿದರು ಆದರೆ ನಮಗೆ ಚುನಾವಣೆ ದಿನಾಂಕ ಘೋಷಣೆಯಾದ ನಂತರವೇ ಪ್ರತಿಭಟನೆಯನ್ನು ಕೈ ಬಿಡುತ್ತೇವೆ ಎಂದು ಸದಸ್ಯರು ಪಟ್ಟು ಹಿಡಿದರು. ಚುನಾವಣೆ ನಡೆಸುವುದು ಚುನಾವಣಾಧಿಕಾರಿಯಾದ ಎಸಿ ಅವರ ವ್ಯಾಪ್ತಿಗೆ ಬರುತ್ತದೆ ಎಂದು ಎಡಿಸಿ ಹೇಳುತ್ತಿದ್ದಂತೆ ಕುಪಿತಗೊಂಡ ಬಿಜೆಪಿ ಸದಸ್ಯರು ಹಿರಿಯ ಸದಸ್ಯರಾಗಿ ನಿಮ್ಮ ಸೂಚನೆ ನೀಡಿ ಎಂದು ಆಗ್ರಹಿಸಿದರು.
  ಪ್ರತಿಭಟನೆಯಲ್ಲಿ ಮಾಜಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ವಿದ್ಯಾವತಿ ಗಡಗಿ, ವಿಜಯಲಕ್ಷ್ಮಿ ದಿಂಡೂರ, ಚಂದ್ರು ತಡಸದ, ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ವಿನಾಯಕ ಮಾನ್ವಿ, ಮುತ್ತು ಮುಶಿಗೇರಿ, ಪ್ರಕಾಶ ಅಂಗಡಿ, ಮಾಹಾಂತೇಶ ನಲವಡಿ, ಬಿಜೆಪಿ ಮುಖಂಡರಾದ ಮಹೇಶ ದಾಸರ, ಶಿವರಾಜಗೌಡ ಹಿರೇಮನಿಪಾಟೀಲ, ಮುಂತಾದವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net