

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 10 ಜನ ಭದ್ರತಾ ಸಿಬ್ಬಂದಿ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಹೊರಗುತ್ತಿಗೆ ಕಾರ್ಮಿಕರ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಿಮ್ಸ್ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
50 ವರ್ಷದ ವಯೋಮಾನದ ಹೆಸರಿನಲ್ಲಿ ಹೊಸದಾಗಿ ಗುತ್ತಿಗೆ ಪಡೆದಿರುವ ಕೆಎಸ್‌ಎಫ್-9 ಕಾರ್ಪೊರೇಟ್ ಸರ್ವೀಸ್ ಸಂಸ್ಥೆಯು 10 ಜನರನ್ನು ಏಕಾಏಕಿ ಕೆಲಸದಿಂದ ಕೈಬಿಟ್ಟಿದೆ. ಇವರು ಕಳೆದ ಏಳೆಂಟು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಇಂತಹ ನೌಕರರನ್ನು ಖಾಸಗಿ ಏಜೆನ್ಸಿಯೊಂದು ತನ್ನದೇ ಆದ ನಿಯಮಬಾಹಿರ ನಿಯಮದಿಂದ ನೌಕರರನ್ನು ಹೊರಗಿಡುವುದು ಸರಿಯಲ್ಲ. ಇದು ಕರ್ನಾಟಕ ವೃಂದಾ ಮತ್ತು ನೇಮಕಾತಿ ಸೇವಾ ನಿಯಮಾವಳಿಗಳಿಗೂ ವಿರುದ್ಧವಾಗಿದೆ. ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದ್ದು, ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು. ಜತೆಗೆ ನೌಕರರನ್ನು ಮರು ನೇಮಕಾತಿ ಮಾಡಬೇಕೆಂದು ಆಗ್ರಹಿಸಿದರು.
ಧರಣಿಯಲ್ಲಿ ಎಂ.ಬಿ.ನಾಗಣ್ಣಗೌಡ, ಸಿದ್ದರಾಜು, ಎಚ್.ಹೊಂಬಯ್ಯ, ಕೆ.ಜಿ.ಗುರುಶಾಂತ, ಅಂದಾನಿ ಸೋಮನಹಳ್ಳಿ, ಗುರುಶಂಕರ್, ಜಿ.ಕೆ.ಕುಮಾರ್, ಎಂ.ಶಿವು, ಬಸವರಾಜು, ಎನ್.ಸೋಮಶೇಖರ್, ನಿರಂಜನ್ ಇತರರು ಭಾಗವಹಿಸಿದ್ದರು.