ನಮ್ಮ ಹೋರಾಟ ಕ್ಷೇತ್ರದ ವಿರುದ್ದ ಅಲ್ಲ, ಸೌಜನ್ಯಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಕದ್ರಿ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ

kadri
ಸೌಜನ್ಯಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಕದ್ರಿ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಕದ್ರಿ ಜೋಗಿ ಮಠದ 1008 ರಾಜಯೋಗಿ ನಿರ್ಮಲಾನಾಥಜೀ ಉದ್ಘಾಟಿಸಿದರು. ಹೋರಾಟ ಸಮಿತಿ ಸಂಚಾಲಕಿ ಪ್ರಸನ್ನ ರವಿ, ಸೌಜನ್ಯ ತಾಯಿ ಕುಸುಮಾ ಸಹಿತ ಹಲವರು ಇದ್ದರು.
Published on

ಮಂಗಳೂರು: ಸೌಜನ್ಯ ಕೊಲೆಯಲ್ಲಿ ನೈಜ ಆರೋಪಿಗಳ ಬಂಧನವಾಗದೆ ಈ ನಾಡಿನಲ್ಲಿ ಮಾನವೀಯತೆ, ಕಾನೂನು, ರಾಜಕೀಯ, ಪ್ರಜಾಪ್ರಭುತ್ವ ವ್ಯವಸ್ಥೆ ಸತ್ತುಹೋಗಿದೆಯಾ ಎಂಬ ಆತಂಕ ಎದುರಾಗಿದೆ. ನಮ್ಮ ಹೋರಾಟ ಕ್ಷೇತ್ರದ ವಿರುದ್ದ ಅಲ್ಲ, ಸೌಜನ್ಯ ಎಂಬ ಬಾಲೆಗೆ ನ್ಯಾಯಕ್ಕಾಗಿ ಎಂದು ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

ಸೌಜನ್ಯ ಹೋರಾಟ ಸಮಿತಿ ಮಂಗಳೂರು ನೇತೃತ್ವದಲ್ಲಿ ಸೌಜನ್ಯಳಿಗೆ ನ್ಯಾಯಕ್ಕಾಗಿ ಭಾನುವಾರ ಸಂಜೆ ಕದ್ರಿ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಈವರೆಗೆ ನ್ಯಾಯಕ್ಕಾಗಿ ಶಾಂತಿಯುತ ಹೋರಾಟ ಮಾಡುತ್ತಾ ನ್ಯಾಯದ ಭಿಕ್ಷೆ ಕೇಳಿದ್ದೇವೆ, ಇನ್ನು ಮುಂದಿರುವುದು ಕ್ರಾಂತಿಯುತ ಹೋರಾಟ. ನಮ್ಮ ಕೆಣಕಲು ಬರಬೇಡಿ. ಮುಗ್ಧ ಬಾಲೆಯನ್ನು ಕೊಲೆಗೈದವರ ಪಾಪದ ಕೃತ್ಯ ಹೊರಬರುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಹೋರಾಟ ಸಮಿತಿ ಸಂಚಾಲಕಿ ಪ್ರಸನ್ನ ರವಿ ಮಾತನಾಡಿ, ಸೌಜನ್ಯ ಕೊಲೆ ಪ್ರಕರಣದಲ್ಲಿ ವಿಳಂಬವಾದರೂ ನೈಜ ಆರೋಪಿಯ ಬಂಧನ ಮೂಲಕ ನ್ಯಾಯ ಸಿಗುವ ವಿಶ್ವಾಸವಿದೆ. ಮುಗ್ಧ ಬಾಲೆ ಸೌಜನ್ಯ ಕೊಲೆ ಪ್ರಕರಣದಲ್ಲಿ ನೈಜ ಆರೋಪಿ ಬಂಧನದ ಧ್ವನಿಯಲ್ಲಿ ಸಮಾಜದ ಬಾಯಿಮುಚ್ಚಿಸಲು ಯಾರಿಗೂ ಸಾಧ್ಯವಿಲ್ಲ ಎಂದರು.

ಸೌಜನ್ಯ ತಾಯಿ ಕುಸುಮಾ ಸಹಿತ ಹಲವರು ಇದ್ದರು. ಪ್ರತಿಭಟನೆ ಮುನ್ನ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಿಂದ ಕದ್ರಿ ಬಯಲು ಮಂದಿರದವರೆಗೆ ಪಾದಯಾತ್ರೆ ನಡೆಯಿತು. ಸಾವಿರಾರು ಮಂದಿ ಈ ಪಾದಯಾತ್ರೆ ಭಾಗವಹಿಸಿದರು. ರೋಹಿತ್ ಉಳ್ಳಾಲ್ ನಿರೂಪಿಸಿದರು. ಶಶಿಕಲಾ ಶೆಟ್ಟಿ ಪ್ರಾರ್ಥಿಸಿದರು. ಸಚಿನ್ ಕುಳಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net