

ಮೈಸೂರು: ಬಗರ್‌ಹುಕುಂ ಸಾಗುವಳಿ ರೈತರಿಗೆ ಕಾಯಂ ಹಕ್ಕುಪತ್ರ ನೀಡುವುದಿಲ್ಲ ಎಂಬ ಕಂದಾಯ ಸಚಿವರ ಹೇಳಿಕೆ ವಿರೋಧಿಸಿ ಹಾಗೂ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಎಐಕೆಕೆಎಂಎಸ್ ಸಂಘದ ವತಿಯಿಂದ ಅ. 18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ.
ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ಬಗರ್‌ಹುಕುಂ ಸಾಗುವಳಿದಾರರ ಅರ್ಜಿಗಳಿವೆ. ಅರ್ಜಿ ಸಲ್ಲಿಸದಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇವರಲ್ಲಿ ಅರಣ್ಯದಂಚಿನ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರ ಗೋಳು ಹೇಳತೀರದಂತಾಗಿದೆ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಎಂ.ಶಶಿಧರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಗುವಳಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡುತ್ತಿದ್ದ ಸರ್ಕಾರ ಇದೀಗ, ರೈತರ ಬುಡಕ್ಕೆ ಕೊಳ್ಳಿ ಇಟ್ಟಿದೆ. ಬಗರ್‌ಹುಕುಂ ಸಾಗುವಳಿ ರೈತರಿಗೆ ಕಾಯಂ ಹಕ್ಕುಪತ್ರ ನೀಡಬಾರದು ಎನ್ನುವುದು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಿದೆ. ರೈತರು ಸಾಗುವಳಿ ಮಾಡುತ್ತಿರುವ ಭೂಮಿಗೆ ಶುಲ್ಕ ಪಡೆದು ನಿಶ್ಚಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದ್ದಾರೆ. ಇದು ರೈತ ವಿರೋಧಿ ನಿರ್ಧಾರವಾಗಿದ್ದು, ಬಡ, ಸಣ್ಣ, ಮಧ್ಯಮ ರೈತರಿಗೆ ಬಗೆದ ದ್ರೋಹವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಶಿವಪ್ರಕಾಶ್, ಮುಖಂಡರಾದ ಸೋಮಶೇಖರ್, ಪಾಪೇಗೌಡ, ಬಸವಲಿಂಗೇಗೌಡ ಇದ್ದರು.