

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿ ಎರಡು ತಿಂಗಳು ಕಳೆದರೂ ಅಧಿಕೃತ ಆದೇಶ ಹೊರಡಿಸದ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡರು ಸಭೆ ಸೇರಿ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಸಿದರು.
ಚನ್ನರಾಯಪಟ್ಟಣ ರೈತರು, ಸಂಯುಕ್ತ ಹೋರಾಟ ಕರ್ನಾಟಕ, ಮತ್ತು ಸಮಾನ ಮನಸ್ಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ, ಸಿಎಂ ಸಿದ್ದರಾಮಯ್ಯ ಜು.25ರಂದು ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವುದಾಗಿ ಘೋಷಿಸಿದ್ದರು ಆದರೆ ಇದುವರೆಗೆ ಯಾವ ಆದೇಶವೂ ಸಿಕ್ಕಿಲ್ಲ ಎಂದು ಸಭೆಯಲ್ಲಿ ರೈತ ಮುಖಂಡ ಕಾರಳ್ಳಿ ಶ್ರೀನಿವಾಸ್ ಹೇಳಿದರು. ಎರಡು ಹಳ್ಳಿಗಳ 439 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಬೆಲೆ ನಿಗದಿಗೆ ಸಭೆ ಕರೆಯಲಾಗಿದೆ ಎಂದು ನೋಟೀಸ್ ನೀಡುವ ಮೂಲಕ ಗೊಂದಲ ಸೃಷ್ಟಿಸಿದೆ. ರೈತರು ಹೋರಾಟ ತೀವ್ರಗೊಳಿಸುವ ಸೂಚನೆ ನೀಡಿದ ನಂತರ ಈ ಸಭೆ ಮುಂದೂಡಲಾಗಿದೆ. ಮುಖ್ಯಮಂತ್ರಿ ಆದೇಶಕ್ಕೆ ಬೆಲೆ ನೀಡದವರನ್ನು ಹೇಗೆ ನಂಬುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ತೀವ್ರಗೊಳಿಸೋಣ: ಸಂಯುಕ್ತ ಹೋರಾಟದ ಮುಂಖಂಡರು ಈ ವಿಷಯವನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದಾರೆ ಮತ್ತು ಮುಖ್ಯಮಂತಿ ಭೇಟಿ ಮಾಡಲು ಸಮಯ ಕೇಳಿದ್ದಾರೆ. ಆದರೆ ದಸರಾ ಹಬ್ಬ ಮತ್ತಿತರ ಕಾರಣಗಳಿಂದ ಭೇಟಿ ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ತಾವು ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ದಸರಾ ಮುಗಿಯುವವರೆಗೆ ಕಾಯೋಣ, ಆ ನಂತರ ನಮ್ಮ ಹೋರಾಟವನ್ನು ತೀವ್ರಗೊಳಿಸೋಣ ಎಂದು ಸಭೆಯಲ್ಲಿದ್ದ ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಹೇಳಿದರು. ರಾಜ್ಯ ರೈತ ಸಂಘದ ಚಂದ್ರ ತೇಜಸ್ವಿ ಮಾತನಾಡಿ, ರೈತರು ತಮ್ಮ ಊರುಗಳಲ್ಲಿ ಮತ್ತೊಮ್ಮೆ ಸಂಘಟಿತರಾಗಿ, ಹೋರಾಟವನ್ನು ಚುರುಕುಗೊಳಿಸಬೇಕು ಎಂದು ಕರೆ ನೀಡಿದರು. ಈ ಬಾರಿ ಹಿಂದಿಗಿಂತಲೂ ಉಗ್ರ ಹೋರಾಟ ರೂಪುಗೊಳ್ಳಲಿದೆ ಎಂದು ಎಚ್ಚರಿಸಿದರು.