ಅಪಪ್ರಚಾಕರು ಶ್ರೀಕೃಷ್ಣನಲ್ಲಿ ಕ್ಷಮೆಯಾಚಿಸಲಿ...

UDP-27-2-Hulivesha
Published on

'ಉಡುಪಿ ಶೈಲಿ ಪಿಲಿ ಒರಿಪುಗ' ಅಭಿಯಾನ

ಹುಲಿವೇಷಧಾರಿಗಳಿಂದ ಪ್ರತಿಭಟನಾ ಪಾದಯಾತ್ರೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯ ಸಾಂಪ್ರದಾಯಿಕ ಶೈಲಿಯ ಹುಲಿವೇಷ ಕುಣಿತ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಮಾನ ಮನಸ್ಕ ಹುಲಿವೇಷ ತಂಡಗಳು ಒಂದುಗೂಡಿ ಉಡುಪಿ ಶೈಲಿ ಪಿಲಿ ಒರಿಪುಗ ಎಂಬ ಅಭಿಯಾನದ ಪ್ರಯುಕ್ತ ಭಾನುವಾರ ಬೃಹತ್​ ಪ್ರತಿಭಟನಾ ಪಾದಯಾತ್ರೆ ನಡೆಸಿದವು.

ಉಡುಪಿ ಜೋಡುಕಟ್ಟೆಯಲ್ಲಿ ಬೆಳಗ್ಗೆ 10:30ಕ್ಕೆ ತಾಸೆ, ವಾದ್ಯ ಹಾಗೂ ವಿಶೇಷ ಹಿಮ್ಮೇಳ ಸೇರಿದಂತೆ ಹುಲಿ ವೇಷ ಧರಿಸುವ ಉಡುಪಿಯ 80ಕ್ಕೂ ಅಧಿಕ ತಂಡದ ಹಿರಿ-ಕಿರಿಯ ಕಲಾವಿದರು, ಪೇಂಟರ್​ಗಳು, ಅಭಿಮಾನಿಗಳು ಹಾಗೂ ಪ್ರೋತ್ಸಾಹಕರು ಮೆರವಣಿಗೆ ನಡೆಸಿದರು.

ಹುಲಿವೇಷ ಕುಣಿತದ ಕುರಿತು ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಉಡುಪಿಯ ಹುಲಿ ವೇಷಧಾರಿಗಳು, ಕಲಾವಿದರು, ಅಭಿಮಾನಿಗಳು ಹಾಗೂ ಪ್ರೋತ್ಸಾಹಕರು ಪಾದಯಾತ್ರೆ ನಡೆಸಿದರು.

ಉಡುಪಿಯ ಸಂಸ್ಕೃತ ಕಾಲೇಜ್​ ಮಾರ್ಗವಾಗಿ ಪಾದಯಾತ್ರೆಯು ರಥಬೀದಿಗೆ ಆಗಮಿಸಿತು. ಅಲ್ಲಿನ ಕನಕ ಗೋಪುರದ ಮುಂದೆ ಹುಲಿ ಕುಣಿತ ಪ್ರದರ್ಶಿಸಲಾಯಿತು.

ಶ್ರೀಕೃಷ್ಣ ಮಠಕ್ಕೆ ಮನವಿ

ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಅವರನ್ನು ಭೇಟಿಯಾದ ಹುಲಿವೇಷಧಾರಿಗಳು ಮನವಿ ಸಮರ್ಪಿಸಿದರು. ಈ ವೇಳೆ ಸುಬ್ರಹ್ಮಣ್ಯ ಉಪಾಧ್ಯ ಮಾರ್ಪಳ್ಳಿ ಮಾತನಾಡಿ, ಇತ್ತೀಚೆಗೆ ಹುಲಿವೇಷ ಕುಣಿತಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್​ ಮಾಡಲಾಗಿದೆ. ಈ ವಿಚಾರವಾಗಿ ವಾಟ್ಸಾಪ್​ ಗ್ರೂಪ್​ ಹಾಗೂ ಜಾಲತಾಣಗಳಲ್ಲಿಯೂ ಚರ್ಚೆ, ವಾದ-ವಿವಾದ ಆಗುತ್ತಿದೆ. ಇದು ನಮ್ಮ ಆಚರಣೆ ಹಾಗೂ ಸಂಸ್ಕೃತಿಗೆ ಧಕ್ಕೆ ತಂದಿದೆ. ಹುಲಿವೇಷ ಕಲಾವಿದರಿಗೂ ಸಹ ಬೇಸರವಾಗಿದೆ. ಉಡುಪಿಯ ಸಾಂಪ್ರದಾಯಿಕ ಹುಲಿವೇಷ ಕುಣಿತು ಅಪಪ್ರಚಾರ ಮಾಡುತ್ತಿರುವವರಿಗೆ ಶ್ರೀಕೃಷ್ಣ ಸದ್ಬುದ್ಧಿ ಕೊಡಲಿ. ಇಲ್ಲವೇ, ಅವರೇ ಬಂದು ಶ್ರೀಕೃಷ್ಣನಲ್ಲಿ ಕ್ಷಮೆ ಯಾಚಿಸಲಿ ಎಂದು ಹೇಳಿದರು.

ಶ್ರೀಕೃಷ್ಣನ ಬಾಲಲೀಲೆಯ ಪ್ರತೀಕ

ಈ ಸಂದರ್ಭದಲ್ಲಿ ಪುತ್ತಿಗೆ ಮಠದ ಮಹಿತೋಷ್​ ಆಚಾರ್ಯ ಮಾತನಾಡಿ, ದೈವ ಹಾಗೂ ದೇವ ಆಚರಣೆ ಈ ಭಾಗದಲ್ಲಿ ಆಚರಣೆಯಲ್ಲಿದೆ. ಉಡುಪಿಯ ಹುಲಿವೇಷ ಕುಣಿತಕ್ಕೆ ಪ್ರಾಚೀನ ಸಾಕ್ಷ್ಯವೂ ಇದೆ. ಈ ಕಲೆಯು ಬಾಲಕೃಷ್ಣನ ಲೀಲೆಯ ಒಂದು ಭಾಗವೇ ಆಗಿದೆ. ಗೋಕುಲದಲ್ಲಿರುವ ಗೋಪಾಲಕರು ತಮ್ಮ ಮೈಮೇಲೆ ಹಾಲು, ಮೊಸರು, ಮಜ್ಜಿಗೆ ಹಾಗೂ ಗೋಮಯ ಸುರಿದುಕೊಂಡಾಗ ಅದು ಅವರ ಮೈಮೇಲೆ ಕಪ್ಪು-ಬಿಳುಪು ಗೆರೆಯಾಗಿ ಮೂಡಿತು. ನೋಡಿದರೆ ಹುಲಿಯ ದೇಹದ ರೀತಿ ಕಾಣುತ್ತಿತ್ತು. ಅದರಿಂದ ಗೋಪಾಲಕರು ತಮಾಷೆಗಾಗಿ ಈ ವೇಷದಲ್ಲಿ ತೆರಳಿ ಗೋವುಗಳನ್ನು ಬೆದರಿಸುವ ಆಟ ಆಡಿದರು. ಶ್ರೀಕೃಷ್ಣನ ಪ್ರಥಮ ಜನ್ಮೋತ್ಸವದಂದು ಆತನೂ ಸಹ ಹುಲಿವೇಷ ಧರಿಸಿ ಕುಣಿದಿದ್ದ ಎನ್ನುವುದು ಭಾಗವತದ ದಶಮ ಸ್ಕಂದದಲ್ಲಿ ಇದೆ. ಹೀಗಾಗಿಯೇ ಶ್ರೀಕೃಷ್ಣ ಮಠವು ಅಷ್ಟಮಿಯ ಸಂದರ್ಭದಲ್ಲಿ ಹುಲಿವೇಷ ಕುಣಿತಕ್ಕೆ ಹಾಗೂ ವೇಷಧಾರಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಚೇತನ್​ ಸುಭಾಷನಗರ, ಕಿಶೋರ್​ ರಾಜ್​ ಕಾಡುಬೆಟ್ಟು, ಕೃಷ್ಣಮೂರ್ತಿ ಆಚಾರ್ಯ, ಮಹೇಶ್​ ಬೈಲೂರು, ದೀಪಕ್​ ಲಕ್ಷ್ಮೀನಗರ, ಭವಾನಿ ಶಂಕರ್​, ಅಖಿಲೇಶ್​, ಸುನೀಲ್​, ಪ್ರದೀಪ್​, ಶ್ರೀಕಾಂತ್​, ಸುರೇಂದ್ರ ಕಾಡಬೆಟ್ಟು ಸೇರಿದಂತೆ ವಿವಿಧ ತಂಡಗಳ ಪ್ರಮುಖರು ಇದ್ದರು.

ಆವೇಶ ಬರುವುದು ಸುಳ್ಳು, ಪ್ರಚಾರದ ಗೀಳು!!

ಉಡುಪಿಯ ಹುಲಿವೇಷದ ಕುರಿತಾಗಿ ಹಾಗೂ ವೇಷಧಾರಿಗಳಿಗೆ ಆವೇಶ ಬರುವುದು ಸುಳ್ಳು. ಅದು ಪ್ರಚಾರಕ್ಕಾಗಿ ಮಾಡುವುದು ಎಂದು ಇತ್ತೀಚೆಗೆ ಉಡುಪಿ ಕಾಡುಬೆಟ್ಟುವಿನ ಸುಷ್ಮಾ ರಾಜ್​ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದರು. ಬಳಿಕ ಈ ವಿಚಾರ ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಹುಲಿವೇಷ ಧಾರಿಗಳ ನಡುವೆಯೇ ವಾಟ್ಸಾಪ್​ ಹಾಗೂ ಜಾಲತಾಣಗಳಲ್ಲಿ ಗಲಾಟೆ, ವಾದ-ವಿವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಹುಲಿವೇಷ ಕುಣಿತದ ಭಕ್ತಿ, ಸಂಸ್ಕೃತಿ, ಆಚರಣೆ ಹಾಗೂ ನಂಬಿಕೆ ಉಳಿಸಲು 'ಉಡುಪಿ ಶೈಲಿ ಪಿಲಿ ಒರಿಪುಗ' ಎಂಬ ಅಭಿಯಾನ ಆರಂಭಗೊಂಡಿದೆ. ಹುಲಿವೇಷ ಕ್ರೀಡೆಯಲ್ಲ, ಅದೊಂದು ಆರಾಧನೆ ಎಂಬುದನ್ನು ಜಾಗೃತಗೊಳಿಸಲು ಉಡುಪಿಯಲ್ಲಿ ಪಾದಯಾತ್ರೆ ಆಯೋಜಿಸಲಾಗಿತ್ತು.

UDP-27-2B-Hulivesha
ಶ್ರೀಕೃಷ್ಣ ಮಠಕ್ಕೆ ಹುಲಿ ವೇಷಧಾರಿಗಳು ಪಾದಯಾತ್ರೆ ಮೂಲಕ ಸಲ್ಲಿಸಿದ ಬೃಹತ್​ ಮನವಿ ಪತ್ರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net