

ಹರಿಹರ: ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಮಾದಿಗ ಸಮುದಾಯದವರು ಮಂಗಳವಾರ ಭಾನುವಳ್ಳಿ ಗ್ರಾಮದಿಂದ ಹರಿಹರ ತಾಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿ, ತಹಸೀಲ್ದಾರ್ಗೆ ಮನವಿ ನೀಡಿದರು.
ಸಂಘಟನೆ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಎ.ಕೆ.ಕಾಲೋನಿಯಲ್ಲಿ ಅಂದಾಜು 150ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಬಹುತೇಕ ಕುಟುಂಬಗಳು ನೆರಿಕೆ, ಕರಿ ಹೆಂಚು, ಕೆಂಪು ಹೆಂಚಿನ ಚಿಕ್ಕ ಮನೆಗಳಲ್ಲಿ ಹಲವು ದಶಕಗಳಿಂದ ಬದುಕು ನಿರ್ವಹಿಸುತ್ತಿವೆ. ಇವುಗಳಿಗೆ ಬಾಗಿಲು, ಕಿಟಕಿ, ಶೌಚಗೃಹ, ಬಚ್ಚಲು ಮತ್ತಿತರ ಸೌಕರ್ಯಗಳು ಇರುವುದಿಲ್ಲ. ಇಂತಹ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದು, ಜನರ ಆರೋಗ್ಯ ಆಗಾಗ ಹದಗೆಡುತ್ತಿರುತ್ತದೆ. ಮಕ್ಕಳ ಶಿಕ್ಷಣಕ್ಕೂ ತೊಡಕಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಸರ್ಕಾರದ ಯಾವುದಾದರೂ ಒಂದು ಯೋಜನೆಯಡಿ ವಸತಿ ಸೌಲಭ್ಯ ಒದಗಿಸುವಂತೆ ಹಲವು ಬಾರಿ ಸ್ಥಳೀಯ ಶಾಸಕರು, ತಹಸೀಲ್ದಾರ್, ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನಿವಾಸಿಗಳಿಗೆ ವಸತಿ ಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ, ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಡಲಾಗುವುದು. ಒಂದು ತಿಂಗಳ ಕಾಲಾವಕಾಶ ನೀಡಿರಿ ಎಂದು ಕೋರಿದಾಗ ಪ್ರತಿಭಟನಾಕಾರರು ಧರಣಿ ಮೊಟಕುಗೊಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಎಚ್.ಕೆ.ಕನ್ನಪ್ಪ, ದಸಂಸ ತಾಲೂಕು ಸಂಘಟನಾ ಸಂಚಾಲಕ ಸಿ.ಚೌಡಪ್ಪ, ಭಾನುವಳ್ಳಿ ಗ್ರಾಮದ ನಿವಾಸಿಗಳಾದ ಕೆಂಚಪ್ಪ, ವಿ.ಬಿ.ಹಳದಪ್ಪ, ಹನುಮಂತಪ್ಪ, ಲಕ್ಷ ್ಮಣಪ್ಪ, ನೀಲಪ್ಪ, ಹರೀಶ್, ಸಂತೋಷ್, ಚೌಡಮ್ಮ, ರತ್ನಮ್ಮ, ದುರುಗಮ್ಮ, ಹನುಮಕ್ಕ, ಪುಷ್ಪಾ, ಸಾವಿತ್ರ, ಸುಶೀಲಮ್ಮ, ನಾಗಮ್ಮ ಹನುಮಮ್ಮ ಇತರರಿದ್ದರು.