ಕಿಮ್ಸ್ ಕಿರಿಯ ವೈದ್ಯರಿಂದ ಪ್ರತಿಭಟನಾ ಮೆರವಣಿಗೆ

h13-Protest
Published on

ಹುಬ್ಬಳ್ಳಿ: ಪ್ರತಿ ವರ್ಷ ಸ್ಟೈಫಂಡ್ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಲ್ಲಿಯ ಕಿಮ್ಸ್‌ನ ಕಿರಿಯ ವೈದ್ಯರ ಸಂಘದ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕಿಮ್ಸ್ ಆವರಣದಿಂದ ಹೊರಟ ಮೆರವಣಿಗೆ ಬಿಆರ್‌ಟಿಎಸ್ ಕಾರಿಡಾರ್ ಮೂಲಕ ಸಾಗಿ ಚನ್ನಮ್ಮ ವೃತ್ತ ತಲುಪಿತು. ಅಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಕಿರಿಯ ವೈದ್ಯರು, ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಭದ್ರತೆ ಕಲ್ಪಿಸಬೇಕು. ವೈದ್ಯಕೀಯ ಸ್ನಾತಕೋತ್ತರ ಪದವಿಯ ಶುಲ್ಕವನ್ನು ಕಡಿಮೆಗೊಳಿಸಬೇಕು. ಪ್ರತಿ ವರ್ಷವೂ ಸ್ಟೈಫಂಡ್ ಹೆಚ್ಚಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ನಮ್ಮ ಸಮಸ್ಯೆ ಬಗೆಹರಿಯುವವರೆಗೆ ಮುಷ್ಕರ ಕೈಬಿಡುವುದಿಲ್ಲ ಎಂದು ಸಂಘದ ಅಧ್ಯಕ್ಷ ಡಾ. ಸುಹಾಸ ಎಸ್.ಟಿ. ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಸಂಘದ ರಾಜ್ಯ ಸಂಚಾಲಕ ಡಾ. ಆದರ್ಶ ಇ.ಎಚ್., ಪ್ರಧಾನ ಕಾರ್ಯದರ್ಶಿ ಡಾ. ಆದರ್ಶಾ ವಿ., ಉಪಾಧ್ಯಕ್ಷೆ ಡಾ. ಹರ್ಷಿತಾ, ಡಾ. ದೀಕ್ಷಂತ್, ಡಾ. ಸುನಿಲ್ ಆರ್., ಡಾ. ರಕ್ಷಿತ್ ಎಂ.ಸಿ., ಡಾ. ರಾಮಚಂದ್ರ, ಡಾ. ವಿಭವ್, ಡಾ. ಪ್ರದೀಪ್ ಸೇರಿದಂತೆ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.
ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ: ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯೆಯ ಹತ್ಯೆ ಖಂಡಿಸಿ ನಗರದ ಕಿಮ್ಸ್ ಆವರಣದಲ್ಲಿ ಮೇಣದ ಬತ್ತಿ ಬೆಳಗಿಸಿ ಮಂಗಳವಾರ ಸಂಜೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಿಮ್ಸ್ ಕಿರಿಯ ವೈದ್ಯರ ಸಂಘ, ಭಾರತೀಯ ವೈದ್ಯಕೀಯ ಸಂಸ್ಥೆಯ ಹುಬ್ಬಳ್ಳಿ ಶಾಖೆ, ಐಎಂಎ ವುಮೆನ್ಸ್ ಡಾಕ್ಟರ್ಸ್‌ ವಿಂಗ್, ಕಿಮ್ಸ್ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net