

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ರಾಜ್ಯ ಸರ್ಕಾರದ ಭ್ರಷ್ಟಾಚಾರ, ದ್ವೇಷ ರಾಜಕೀಯ ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಮಂಗಳವಾರ ಬೆಳ್ತಂಗಡಿ ಆಡಳಿತ ಸೌಧದ ಬಳಿ ನಡೆಯಿತು.
ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಸಾವಿರಾರು ಬಿಜೆಪಿ ಕಾರ್ಯಕರ್ತರು ಬೆಳ್ತಂಗಡಿ ಅಯ್ಯಪ್ಪ ಗುಡಿಯ ಬಳಿ ಒಟ್ಟು ಸೇರಿ ಅಲ್ಲಿಂದ ಬೆಳ್ತಂಗಡಿ ನಗರದ ಮೂಲಕ ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕಾರ್ಯಕರ್ತರ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಪೆಟ್ರೋಲ್ ಮತ್ತು ಡಿಸೇಲ್‌ಗೆ ಬೆಲೆ ಏರಿಕೆ ಮಾಡಿರುವುದರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಬೆಳ್ತಂಗಡಿಯಲ್ಲಿ ಹಿಂದೆ ದ್ವೇಷದ ರಾಜಕಾರಣ ಇರಲಿಲ್ಲ, ವಸಂತ ಬಂಗೇರ ಯಾವತ್ತೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಆದರೆ ಕಳೆದ ಒಂದು ವರ್ಷದಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ. ಪೊಲೀಸರ ಮೇಲೆ ಒತ್ತಡ ಹಾಕಿ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಮೇಲೆ ಕೇಸು ಹಾಕಿ ಅರೆಸ್ಟ್ ಮಾಡಿದರು. ಸಾಮಾನ್ಯ ಕಾರ್ಯಕರ್ತ ಪ್ರಮೋದ್ ವ್ಯವಹಾರನ್ನು ತಡೆಯಲು ಕೇಸು ಹಾಕಿದರು. ಎಸ್.ಸಿ ಮೋರ್ಚಾದ ಅಧ್ಯಕ್ಷ ರಾಜೇಶ್ ಮಲೆಕುಡಿಯರ ಮೇಲೆ ಕಾಂಗ್ರೆಸ್‌ನ ಒಬ್ಬ ಪುಡಾರಿ ತಲವಾನಿಂದ ಹಲ್ಲೆ ಮಾಡಿ ಹತ್ಯೆ ಮಾಡಲು ಸಂಚು ರೂಪಿಸಿದರು. ಒಂದು ವರ್ಷದಲ್ಲಿ ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಈ ರೀತಿ ಜನಸಾಮಾನ್ಯರ ಮೇಲಿನ ದ್ವೇಷದ ರಾಜಕಾರಣ ಕರ್ನಾಟಕದ ಯಾವುದೇ ಕ್ಷೇತ್ರದಲ್ಲಿ ನಡೆಯಲು ಸಾಧ್ಯವಿಲ್ಲ.ಇದಕ್ಕೆ ಮಲ್ಲೇಶ್ವರದಿಂದ ಬೆಳ್ತಂಗಡಿಗೆ ಆಗಮಿಸಿರುವ ರೌಡಿ ಪುಡಾರಿಯೇ ಕಾರಣರಾಗಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಮುಖಂಡ ಹರಿಕೃಷ್ಣ ಬಂಟ್ವಾಳ್, ಕುಶಾಲಪ್ಪ ಗೌಡ ಪೂವಾಜೆ, ಪ್ರಸಾದ್ ಕುಮಾರ್ ಬೆಳ್ತಂಗಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾಂತ್ ಪಾರೆಂಕಿ ಮತ್ತು ಜಯಾನಂದ ಗೌಡ, ಜಿ.ಪಂ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.