ಗೋ ಸಾಗಾಣಿಕೆ ಮಾಹಿತಿ ನೀಡಿದ್ದಕ್ಕೆ ಬೆದರಿಕೆ ಹಾಕಿದ್ರಾ ಡಿವೈಎಸ್ಪಿ..?

06_11_Mdy_Protest 01
Published on

ಮಂಡ್ಯ: ಗೋ ಸಾಗಾಣಿಕೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಮಳವಳ್ಳಿ ಡಿವೈಎಸ್ಪಿ ಪೃಥ್ವಿ ಅವರನ್ನು ಅಮಾನತುಗೊಳಿಸಬೇಕೆಂದು ಜಿಲ್ಲಾ ಎಸ್ಪಿ ಕಚೇರಿ ಎದುರು ಹಿಂದು ಜಾಗರಣಾ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.
ವೇದಿಕೆ ಅಧ್ಯಕ್ಷ ಕೆ.ಯೋಗಾನಂದ ಅವರು ಗುರುವಾರ ಮಧ್ಯಾಹ್ನ ಮದ್ದೂರು-ಕುಣಿಗಲ್ ಮಾರ್ಗವಾಗಿ ಗೋವುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಇವರು ನೀಡಿದ ಮಾಹಿತಿ ಮೇರೆಗೆ ಮದ್ದೂರು ಪೊಲೀಸರು, ವಾಹನವನ್ನು ವಶಪಡಿಸಿಕೊಂಡು ಠಾಣೆಗೆ ಕರೆತಂದಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಹೋದಾಗ ಪಿಎಸ್‌ಐ, ಸಂಜೆವರೆಗೂ ಠಾಣೆಯಲ್ಲಿ ಕೂರಿಸಿಕೊಂಡಿದ್ದರು. ಇದಲ್ಲದೆ ಅಲ್ಲಿಯೇ ಇದ್ದ ಡಿವೈಎಸ್ಪಿ ಪೃಥ್ವಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇನ್ನು ಬಲವಂತವಾಗಿ ಯಾವುದೋ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಬೇರೆಲ್ಲಾದರೂ ಇದನ್ನು ಪ್ರಶ್ನಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದೆಂದು ಬೆದರಿಕೆ ಹಾಕಿದ್ದಾರೆ. ಗೋವು ಸಾಗಾಣಿಕೆ ಮಾಹಿತಿ ನೀಡಿರುವುದು ತಪ್ಪೆಂದು ಹೆದರಿಸಿದ್ದಾರೆ. ಆದ್ದರಿಂದ ಡಿವೈಎಸ್ಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾ.ಸಿದ್ದರಾಮಯ್ಯ, ಕೆ.ಯೋಗಾನಂದ, ಸಿದ್ದರಾಜುಗೌಡ, ಶ್ರೀಧರ, ವಿವೇಕ್, ಯೋಗೇಶ್, ಕುಮಾರ, ಪ.ನಾ.ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net