

ಪಾಂಡವಪುರ: ಹೆಚ್ಚಿನ ಸುಂಕ ವಸೂಲಿ ಜತೆಗೆ ವ್ಯಾಪಾರಸ್ಥರು ಮತ್ತು ರೈತರ ಮೇಲೆ ಗುತ್ತಿಗೆದಾರ ದಬ್ಬಾಳಿಕೆ ನಡೆಸುತ್ತಿದ್ದಾನೆಂದು ಆರೋಪಿಸಿ ಸ್ವಾಭಿಮಾನಿ ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ವಿವಿಧ ಪ್ರಮುಖ ರಸ್ತೆಗಳ ಬದಿಯಲ್ಲಿ ವ್ಯಾಪಾರ ನಡೆಸುವ ವ್ಯಾಪಾರಸ್ಥರು ಪುರಸಭೆ ಕಚೇರಿ ಮುಂಭಾಗ ಜಮಾವಣೆಗೊಂಡು ಪುರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚಿನ ಸುಂಕ ವಸೂಲಿ ಮಾಡುತ್ತಿರುವ ಗುತ್ತಿಗೆದಾರ ನಾಗೇಶ್ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ನಿಗದಿ ಪಡಿಸಿದರುವುದಕ್ಕಿಂತ ಹೆಚ್ಚಿನ ಸುಂಕ ವಸೂಲಿ ಮಾಡದಂತೆ ತಾಕೀತು ಮಾಡಬೇಕು ಎಂದು ಒತ್ತಾಯಿಸಿದರು.
ಸುಂಕ ವಸೂಲಾತಿಗೆ ಹರಾಜು ಪ್ರಕ್ರಿಯೆ ಮೂಲಕ ಗುತ್ತಿಗೆ ನೀಡಲಾಗಿದೆ. ಪುರಸಭೆ ನಿಗದಿ ಪಡಿಸಿರುವಂತೆ 20 ರೂ. ಸುಂಕ ವಸೂಲಿ ಮಾಡಬೇಕು. ಆದರೆ ಗುತ್ತಿಗೆದಾರ 70, 80 ಸುಂಕ ವಸೂಲಿ ಮಾಡುತ್ತಾರೆ. ಕೊಡದಿದ್ದರೆ ವ್ಯಾಪಾರಕ್ಕಿಟ್ಟಿರುವ ಪದಾರ್ಥಗಳನ್ನು ರಸ್ತೆಗೆ ಚೆಲ್ಲುತ್ತಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸುವ ಮೂಲಕ ದಬ್ಬಾಳಿಕೆ ನಡೆಸುತ್ತಾನೆ. ವ್ಯಾಪಾರಕ್ಕೆ ಬರುವ ರೈತರ ಜತೆಯಲ್ಲೂ ಇದೇ ರೀತಿ ವರ್ತನೆ ತೋರುತ್ತಾನೆ ಎಂದು ವ್ಯಾಪಾರಸ್ಥರು ಆರೋಪಿಸಿದರು.
ಪ್ರತಿಭಟನಾಕಾರರಿಂದ ಮನವಿ ಆಲಿಸಿದ ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರು ಪುರಸಭೆ ನಿಗದಿ ಪಡಿಸಿರುವ ಸುಂಕಕ್ಕಿಂತ ಹೆಚ್ಚಿಗೆ ಕೊಡಬಾರದು. ಈ ಬಗ್ಗೆ ಗುತ್ತಿಗೆದಾರನಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ಉಪಾಧ್ಯಕ್ಷ ಯೋಗೇಶ್, ಗೌರವಾಧ್ಯಕ್ಷ ಶಾಂತಿಪ್ರಸಾದ್, ಸ್ವಾಭಿಮಾನಿ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗರಾಜು, ಪೀಟರ್, ರಾಮಣ್ಣ, ಸೌತೆಕಾಯಿ ರಾಣಿ ಇತರರು ಇದ್ದರು.