ಅಪಘಾತದಲ್ಲಿ ಸಾವಿಗೀಡಾದ ಎತ್ತುಗಳಿಗೆ ಪರಿಹಾರಕ್ಕೆ ಆಗ್ರಹ: ಮಹದೇಶ್ವರಪುರ ಗ್ರಾಮದ ಪಾಂಡವಪುರ-ನಾಗಮಂಗಲ ರಸ್ತೆಯಲ್ಲಿ ಅಸ್ತವ್ಯಸ್ತ

Pro
Published on

ಪಾಂಡವಪುರ: ತಾಲೂಕಿನ ಮಹದೇಶ್ವರಪುರ ಸಮೀಪ ಮೂರು ಎತ್ತಿನಗಾಡಿಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂರು ಎತ್ತುಗಳು ಸ್ಥಳದಲ್ಲೇ ಸಾವಿಗೀಡಾಗಿ ಒಂದು ಎತ್ತಿನ ಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಮಹದೇಶ್ವರಪುರ ಗ್ರಾಮದ ಪಾಂಡವಪುರ-ನಾಗಮಂಗಲ ಮುಖ್ಯರಸ್ತೆಯ ಹಾಲಪ್ಪಿ ಕೊಳದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಲಾರಿ ಚಾಲಕನ ಅಜಾಗರೂಕತೆಯಿಂದ ಎತ್ತುಗಳು ಮೃತಪಟ್ಟಿರುವ ಜತೆಗೆ ನಾಲ್ವರಿಗೆ ಗಂಭೀರ ಗಾಯವಾಗಿದೆ. ಎತ್ತಿನ ಗಾಡಿ ಸಂಪೂರ್ಣ ಹಾನಿ ಆಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಂಬಂಧಪಟ್ಟವರನ್ನು ಕರೆಸಿ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಪೊಲೀಸರು ಎತ್ತುಗಳನ್ನು ಅಪಘಾತ ಸ್ಥಳದಿಂದ ಕ್ರೇನ್ ಮೂಲಕ ಸ್ಥಳಾಂತರಿಸಿದ್ದಾರೆ. ಜತೆಗೆ ಅಪಘಾತಕ್ಕೆ ಕಾರಣವಾದ ಲಾರಿಯನ್ನೂ ಬೇರೆಡೆಗೆ ಕಳುಹಿಸಲಾಗಿದೆ. ಎತ್ತುಗಳ ಮಾಲೀಕರಿಗೆ ಪರಿಹಾರ ನೀಡದ ಹೊರತು ಎತ್ತುಗಳ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಸುಮಾರಾಣಿ, ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಪರಿಹಾರದ ವಿಚಾರವಾಗಿ ಶಾಸಕರ ಗಮನಕ್ಕೆ ತರಲಾಗಿದೆ. ಆವರು ಸಂಬಂಧಪಟ್ಟವರ ಜತೆ ಮಾತನಾಡಿ ಪರಿಹಾರ ಒದಗಿಸುತ್ತಾರೆ. ಹೀಗಾಗಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಪ್ರತಿಭಟನೆಯಿಂದ ಹಿಂದೆ ಸರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net