ಗ್ರಾಪಂ ನೌಕರರಿಂದ ಕರ್ತವ್ಯಲೋಪ: ಮಾಜಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ

Protest
Published on

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಹಲವು ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಮತ್ತು ನೌಕರರು ಕರ್ತವ್ಯಲೋಪ ಎಸಗುತ್ತಿದ್ದಾರೆ ಎಂದು ಆರೋಪಿಸಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ತಡಗವಾಡಿ ಗ್ರಾಪಂ ಅಧ್ಯಕ್ಷ ಜಿ.ಎನ್.ಮಧು, ಸದಸ್ಯರು ಮತ್ತು ಹಲವು ಗ್ರಾಮಸ್ಥರು ಪ್ರತಿಭಟಿಸಿದರು. ಪಿಡಿಒ, ಕಾರ್ಯದರ್ಶಿ ಮತ್ತು ಕೆಲ ನೌಕರರು ಸರ್ಕಾರದ ಆದೇಶದಂತೆ, ಪಂಚಾಯಿತಿ ನಿಯಮದಂತೆ ಕೆಲಸಗಳನ್ನು ನಿರ್ವಹಿಸದೇ ಅಸಹಕಾರ ತೋರುತ್ತಿದ್ದಾರೆ. ಸಾರ್ವಜನಿಕವಾಗಿ ಕುಂದುಕೊರತೆಗಳು ಹೆಚ್ಚಾಗಲು ಕಾರಣರಾಗಿದ್ದಾರೆ ಎಂದು ಆರೋಪಿಸಿ ಜಿಪಂ ಸಿಇಒ ಶಾಂತಾ ಎಂ.ಹುಲ್ಮನಿ ಅವರಿಗೆ ಕೆಲ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರು.
ಪಿಡಿಒ ಜತೆ ಚರ್ಚಿಸಿ ಗ್ರಾಮಸಭೆಗೆ ದಿನಾಂಕ ನಿಗದಿಪಡಿಸಿದ್ದರೂ ಸಭೆ ನಡೆಸಿಲ್ಲ. ಬಜೆಟ್ ಮಂಡನೆ ಮಾಡಿರುವುದಿಲ್ಲ. 14ನೇ ಹಣಕಾಸು ಖಾತೆಯಲ್ಲಿ ಬಾಕಿ ಇರುವ ಹಣವನ್ನು ಕೆಇಬಿಗೆ ಬಾಕಿ ಇರುವ ಬಿಲ್ ಪಾವತಿಸುವಂತೆ ಸರ್ಕಾರದ ಆದೇಶವಿದ್ದರೂ ಹಣ ಪಾವತಿಸಿಲ್ಲ. ನರೇಗಾ ಯೋಜನೆಯ ಸಾಮಗ್ರಿ ವೆಚ್ಚದ ಹಣ ಬಿಡುಗಡೆಯಾಗಿದ್ದರೂ ಯಾವುದೇ ಮಾಹಿತಿ ನೀಡಿಲ್ಲ, ಫಲಾನುಭವಿಗಳಿಗೆ ಹಣವನ್ನು ಪಾವತಿ ಮಾಡಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ವೆಂಕಟಮ್ಮ, ಸದಸ್ಯರಾದ ಎಚ್.ಆರ್.ಸುಮಿತ್ರಾ, ಶಾರದಮ್ಮ, ಡಿ.ಸುಕನ್ಯಾ, ಶಶಿಕಲಾ, ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net