

ಮಂಡ್ಯ: ಗುಜರಾತ್‌ನಲ್ಲಿ ಸನ್ನಡತೆ ಹೆಸರಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದವರನ್ನು ಜೈಲಿನಿಂದ ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ನಗರದಲ್ಲಿ ಶನಿವಾರ ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಗುಜರಾತ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ಬಿಡುಗಡೆ ಆದೇಶ ರದ್ದುಗೊಳಿಸಿ ಜೀವಿತಾವಧಿ ಕಾಲವನ್ನು ಜೈಲಿನಲ್ಲಿ ಶಿಕ್ಷೆ ಅನುಭವಿಸುವಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
2002ರಲ್ಲಿ ಗುಜರಾತ್‌ನಲ್ಲಿ ಐದು ತಿಂಗಳ ಗರ್ಭಿಣಿ, ಈಕೆಯ ಎರಡು ತಿಂಗಳ ಬಾಣಂತಿ ಹಾಗೂ ಕುಟುಂಬದ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಹನ್ನೊಂದು ಜನರಿಗೆ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಇದೀಗ ಅಮೃತ ಮಹೋತ್ಸವದ ಹೆಸರಿನಲ್ಲಿ ಡೋಂಗಿ ಸನ್ನಡತೆಯ ಹೆಸರಿನಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೆ ಅವರಿಗೆಲ್ಲ ಸಾರ್ವಜನಿಕ ಸ್ಥಳದಲ್ಲಿ ಹಾರ, ತುರಾಯಿಗಳ ಸನ್ಮಾನ ಮಾಡಿರುವುದು ದೇಶದ ಸ್ವಾಭಿಮಾನಿ ಮಹಿಳೆಯರಿಗೆ ಮಾಡಿದ ಅಪಮಾನ. ಜತೆಗೆ ಇಂತಹ ಕ್ರಮವನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದರು.
ಇನ್ನು ಗುಜರಾತ್ ಸರ್ಕಾರ ತೆಗೆದುಕೊಂಡಿರುವ ಕ್ರಮದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರು ಮೌನವಾಗಿರುವ ನಡೆ ಖಂಡನೀಯ. ಈ ಹಿನ್ನೆಲೆಯಲ್ಲಿ ತಕ್ಷಣವೇ 11 ಜನರಿಗೆ ನೀಡಿದ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ ಜೈಲಿನಲ್ಲಿ ಉಗ್ರ ಶಿಕ್ಷೆ ಅನುಭವಿಸುವಂತೆ ಕ್ರಮ ವಹಿಸಬೇಕು. ಅಂತೆಯೇ ರಾಜಸ್ತಾನದ ಶಾಲೆಯಲ್ಲಿ ಕುಡಿಯುವ ನೀರು ಮುಟ್ಟಿದ ಕಾರಣಕ್ಕೆ ದಲಿತ ಸಮುದಾಯದ ಬಾಲಕನನ್ನು ಥಳಿಸಿ ಕೊಂದವನಿಗೆ ಉಗ್ರ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಜಿಲ್ಲಾಧ್ಯಕ್ಷ ಲತಾ, ಕಾರ್ಯದರ್ಶಿ ಸುಶೀಲಾ, ರಾಜ್ಯ ಸಹ ಕಾರ್ಯದರ್ಶಿ ಸುನೀತಾ, ಶೋಭಾ, ಮಂಜುಳಾ, ರಾಣಿ, ವರದೇವಿ, ಸುನೀತಾ, ಜಯಶೀಲಾ ಇತರರಿದ್ದರು.