ಸಾವಿಗೆ ಕಾರಣನಾದ ಶಿಕ್ಷಕನಿಗೆ ಶಿಕ್ಷೆಯಾಗಲಿ: ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ

Protest
Published on

ಮಂಡ್ಯ: ರಾಜಸ್ತಾನದಲ್ಲಿ ನೀರನ್ನು ಮುಟ್ಟಿದ ದಲಿತ ಸಮುದಾಯದ ಬಾಲಕನಿಗೆ ತೀವ್ರವಾಗಿ ಥಳಿಸಿ ಆತನ ಸಾವಿಗೆ ಕಾರಣನಾದ ಶಿಕ್ಷಕನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ಗುರುವಾರ ಪ್ರತಿಭಟಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ನೀರನ್ನು ಮುಟ್ಟಿದ ಬಾಲಕನನ್ನು ಶಿಕ್ಷಕ ತೀವ್ರವಾಗಿ ಥಳಿಸಿದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಬಾಲಕನ ಸಾವಿಗೆ ಕಾರಣವಾಗಿರುವ ಶಿಕ್ಷಕನಿಗೆ ಕಠಿಣ ಶಿಕ್ಷೆ ವಿಧಿಸಿ, ಮೃತನ ಕುಟುಂಬಕ್ಕೆ ಪರಿಹಾರ ನೀಡಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಸಣ್ಣಪುಟ್ಟ ಘಟನೆಗೆ ತಕ್ಷಣ ಪ್ರತಿಕ್ರಿಯಿಸುವ ಕಾಂಗ್ರೆಸ್ ಮುಖಂಡರು ಎಲ್ಲಿ ಹೋಗಿದ್ದಾರೆ?. ದಲಿತರ ಪರ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ಸಿಗರು, ಅದೇ ಪಕ್ಷದ ಸರ್ಕಾರ ಇರುವ ರಾಜಸ್ತಾನದಲ್ಲಿ ನಡೆದ ಘಟನೆಯನ್ನು ಬಹಳ ಲಘುವಾಗಿ ತೆಗೆದುಕೊಂಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ರಾಜಸ್ತಾನದ ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಲಿ. ಸಣ್ಣ ಸಣ್ಣ ವಿಚಾರಕ್ಕೂ ಬೊಮ್ಮಾಯಿ ಅವರ ರಾಜೀನಾಮೆ ಕೇಳುವ ಅವರಿಗೆ ನಾಚಿಕೆಯಾಗುವುದಿಲ್ಲವೇ?. ಪ್ರತಿದಿನ ಹೆಣ್ಣು ಮಕ್ಕಳ ತೇಜೋವಧೆ ಮಾಡುವ ಪ್ರಿಯಾಂಕ ಖರ್ಗೆ ಅವರಿಗೆ ದಲಿತ ಬಾಲಕನ ಸಾವು ಕಾಣಲಿಲ್ಲವೇ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಅಶೋಕ್ ಜಯರಾಂ, ಡಾ.ಲಕ್ಷ್ಮೀ ಅಶ್ವಿನ್‌ಗೌಡ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಆರ್.ನಿತ್ಯಾನಂದ, ಉಪಾಧ್ಯಕ್ಷ ಡಿ.ರಾಜು, ಎಂ.ಬಿ.ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net