ಮತದಾನ ಬಹಿಷ್ಕಾರಕ್ಕೆ ನಿರ್ಧಾರ: ಗೌಡಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ

Srp
Published on

ಶ್ರೀರಂಗಪಟ್ಟಣ: ತಾಲೂಕಿನ ಗೌಡಹಳ್ಳಿ ಗ್ರಾಮದ ಸಾವಿರಾರು ಜನರು ಈ ಬಾರಿ ಸಾಮೂಹಿಕವಾಗಿ ತಮ್ಮ ಮತದಾನ ಬಹಿಷ್ಕರಿಸುವುದಾಗಿ ನಿರ್ಧರಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಗ್ರಾಮದ ಪ್ರವೇಶದ್ವಾರದ ರಸ್ತೆಯಲ್ಲಿ ಅಡ್ಡಲಾಗಿ ಕುಳಿತ ವೃದ್ದರು, ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಜನರು ತಾಲೂಕು ಮತ್ತು ಜಿಲ್ಲಾಡಳಿತ ಹಾಗೂ ಜಿಲ್ಲೆಯ ರಾಜಕಾರಣಿಗಳ ವಿರುದ್ಧ ಸಾಲು ಸಾಲು ಘೋಷಣೆ ಕೂಗಿ ಬೆಂ-ಮೈ ರಾಷ್ಟ್ರೀಯ ಹೆದ್ದಾರಿಗೆ ಕೆಳಸೇತುವೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಆಕ್ರೋಶ ಹೊರಹಾಕಿದರು.

ಬಳಿಕ ಗ್ರಾಮದ ಜನರು ತಮ್ಮ ಸಮಸ್ಯೆ ಕುರಿತು ಮಾತನಾಡಿ, ಬೆಂಗಳೂರು-ಮೈಸೂರು ರಾಷ್ಡ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭವಾದ ಕಳೆದ 3 ವರ್ಷಗಳಿಂದ ಗೌಡಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದ ಸಾವಿರಾರು ಜನರು ನೂರಾರು ಸಮಸ್ಯೆಗಳಿಗೆ ಸಿಲುಕಿ ನರಳುತ್ತಿದ್ದು, ಇಲ್ಲಿನ ಅಧ್ವಾನ ರಸ್ತೆಯಿಂದ ಹಲವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವಾಗಿ ಇದ್ದ ಗೌಡಹಳ್ಳಿ - ಸಬ್ಬನಕುಪ್ಪೆ ಗ್ರಾಮಗಳ ನಡುವಿನ ಲೋಕೋಪಯೋಗಿ ರಸ್ತೆ ಕಡಿತದಿಂದ ಗ್ರಾಮಗಳ ರೈತಾಪಿ ಜನರು ತಮ್ಮ ಕೃಷಿ ಕಾರ್ಯ ಸೇರಿದಂತೆ ಬೆಳೆ ಸಾಗಣೆ ಹಾಗೂ ಜಾನುವಾರುಗಳೊಂದಿಗೆ 6 ಕಿ.ಲೋ. ಮೀಟರ್ ದೂರ ಬಳಸಿ ಬರುವಂತಾಗಿದೆ. ಶ್ರೀರಂಗಪಟ್ಟಣ ಮತ್ತು ಮೈಸೂರಿಗೆ ತೆರಳುವ ಶಾಲಾ ವಿದ್ಯಾರ್ಥಿಗಳು, ಆಸ್ಪತ್ರೆಗೆ ತೆರಳುವ ವೃದ್ಧರು ಸೂಕ್ತ ರಸ್ತೆ ಸಂಪರ್ಕವಿಲ್ಲದೆ, ಸಾರಿಗೆ ವಾಹನಗಳಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಈ ಎಲ್ಲಾ ಸಮಸ್ಯೆಗಳಿಂದ ನರಳುತ್ತಿರುವ ನಾವು ಹೆದ್ದಾರಿ ತಡೆ ನಡೆಸಿ ಸರ್ಕಾರದ ಗಮನ ಸೆಳೆದು, ಹಲವಾರು ಬಾರಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಂಸದೆ ಸುಮಲತಾ ಅಂಬರೀಶ್, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅವರಿಗೆ ಮನವಿ ಮಾಡಿ ಅವರ ಮೂಲಕ ಗ್ರಾಮದ ಹೆದ್ದಾರಿ ಗೇಟ್ ಬಳಿ ಕೆಳಸೇತುವೆ ಅಥವಾ ಮೇಲ್ ಸೇತುವೆ ನಿರ್ಮಿಸಿ ಕೊಡುವಂತೆ ಬೇಡಿದರೂ ನಮ್ಮನ್ನು ನಿರ್ಲಕ್ಷಿಸಿದ್ದಾರೆ. ಗೌಡಹಳ್ಳಿ ಗ್ರಾಮಕ್ಕೆ ಇರುವ ಸಂಪರ್ಕ ಕಡಿತಗೊಳಿಸಿ ಕಷ್ಟಕ್ಕೆ ದೂಡಿದ್ದಾರೆ.

ಬೆಂ-ಮೈ ರಾಷ್ಟ್ರೀಯ ಹೆದ್ದಾರಿಗೆ ಶೀಘ್ರ ಕೆಳಸೇತುವೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಹಾಗೂ ಗ್ರಾಮಕ್ಕೆ ಜಿಲ್ಲಾಧಿಕಾರಿ ಆಗಮಿಸಿ ನಮ್ಮ ಸಮಸ್ಯೆಗಳನ್ನು ಆಲಿಸಿ ಬಗೆಹರಿಸದಿದ್ದಲ್ಲಿ ಇಂತಹ ರಾಜಕಾರಣಿಗಳ ಸುಳ್ಳು ಭರವಸೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷೃದ ನಡೆಯನ್ನು ಖಂಡಿಸಿ ವಿಧಾನಸಭೆಯ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಗ್ರಾಮದ ಯಜಮಾನ ಜಿ.ಎನ್.ಪದ್ಮನಾಭ್, ಮುಖಂಡರಾದ ನಾಗರಾಜು, ಚಂದ್ರೇಗೌಡ, ಜಯರಾಮೇಗೌಡ, ನಿಂಗೇಗೌಡ, ಚುಂಚೇಗೌಡ, ಜವರೇಗೌಡ, ಕೆಂಚೇಗೌಡ, ವಿಜಯೇಂದ್ರ, ಅಶೋಕ, ಅನಿಲ್, ಸದಾನಂದ, ಭೈರೇಶ್, ಸವಿತ ಗೌರಮ್ಮ ಹೊನ್ನಮ್ಮ, ಇಂದ್ರಮ್ಮ ಶಾಂತಮ್ಮ, ಚೆನ್ನಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net