ಹುದ್ದೆ ಕಾಯಂಗೊಳಿಸಲು ಒತ್ತಾಯ: ಪೌರಕಾರ್ಮಿಕರು, ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

19_01_Mdy_01(Protest)
Published on

ಮಂಡ್ಯ: ನಗರಸಭೆಯ ಎಲ್ಲ ಪೌರಕಾರ್ಮಿಕರನ್ನು ಕಾಯಂಗೊಳಿಸುವಂತೆ ಹಾಗೂ ಹೊರಗುತ್ತಿಗೆ ವಾಹನ ಚಾಲಕರನ್ನು ನೇರಪಾವತಿಗೆ ತರುವಂತೆ ಒತ್ತಾಯಿಸಿ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಪೌರಕಾರ್ಮಿಕರ ಸಂಘ ಹಾಗೂ ಹೊರಗುತ್ತಿಗೆ ನೌಕರರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ನೌಕರರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಅಂತೆಯೇ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ರವಾನಿಸಿದರು.

ರಾಜ್ಯಸರ್ಕಾರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಲು ನಿರ್ಧರಿಸಿದೆ. ಆದರೆ ಈ ನೇಮಕಾತಿಯಲ್ಲಿ ನಗರಸಭೆ ಹಾಗೂ ಪಾಲಿಕೆಗಳ ಪೌರಕಾರ್ಮಿಕರಿಗೆ ಅನ್ಯಾಯ ಎಸಗಿದೆ. ಪುರಸಭೆ ಪಟ್ಟಣ ಪಂಚಾಯತಿಗಳಲ್ಲಿ ನೂರಕ್ಕೆ ನೂರರಷ್ಟು ಪೌರಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆದರೆ ನಗರಸಭೆ ಹಾಗೂ ಪಾಲಿಕೆಗಳಲ್ಲಿ ಶೇ.50ರಷ್ಟು ಮಾತ್ರ ಮಂಜೂರಾದ ಹುದ್ದೆಗಳನ್ನು ತುಂಬುತ್ತಿದ್ದು, ಇದರಿಂದಾಗಿ ಕಾರ್ಮಿಕರನ್ನು ಗುತ್ತಿಗೆ ಪದ್ದತಿಯಲ್ಲೆ ಮುಂದುವರಿಸಲು ನಿರ್ಧರಿಸಿರುವುದು ತಾರತಮ್ಯ ಎಂದು ಆಕ್ರೋಶ ಹೊರಹಾಕಿದರು.

ಸರ್ಕಾರದ ನಿರ್ಧಾರದಿಂದಾಗಿ ಮಂಡ್ಯ ನಗರಸಭೆಯ 160 ಜನ ಪೌರಕಾರ್ಮಿಕರ ಪೈಕಿ 36 ಜನ ಕಾರ್ಮಿಕರು ಮಾತ್ರ ಕಾಯಂಗೊಳ್ಳಲಿದ್ದು, ಇನ್ನುಳಿದವರು ನೇರಪಾವತಿ ಹಾಗೂ ಗುತ್ತಿಗೆಯಲ್ಲೆ ಮುಂದುವರಿಯುವಂತಾಗಿದೆ. ಆದ್ದರಿಂದ ಎಲ್ಲ ಪೌರಕಾರ್ಮಿಕರನ್ನು ಏಕಕಾಲಕ್ಕೆ ನೇರನೇಮಕಾತಿಗೊಳಿಸಬೇಕು. ಇದಲ್ಲದೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಸದ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು ಸೇರಿದಂತೆ ಇನ್ನುಳಿದ ಹೊರಗುತ್ತಿಗೆ ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೆ ಒಳಪಡಿಸಬೇಕು. ಇದರಿಂದ ಸರ್ಕಾರ ಅನಗತ್ಯವಾಗಿ ಶೇ.18 ಜಿಎಸ್‌ಟಿ ಪಾವತಿಸುವುದು ಹಾಗೂ ಗುತ್ತಿಗೆ ಏಜೆನ್ಸಿಗಳಿಗೆ ನೀಡುವ ಶೇ.5ರ ಸೇವಾ ಶುಲ್ಕ ಉಳಿಯಲಿದೆ. ಈ ಎಲ್ಲ ವೆಚ್ಚವನ್ನು ಹೊರಗುತ್ತಿಗೆ ನೌಕರರಿಗೆ ನೀಡಿ ನೌಕರರ ದಕ್ಷತೆ ಹೆಚ್ಚಿಸಬಹುದು. ಈ ಸಂಬಂದ ಹಣಕಾಸು ಇಲಾಖೆ ಮುಂದಿರುವ ಪ್ರಸ್ತಾವನೆಗೆ ಸರ್ಕಾರ ಅಂಗೀಕಾರ ನೀಡಬೇಕು. 2017ರಲ್ಲಿ ಅಂದಿನ ರಾಜ್ಯ ಸರ್ಕಾರ ಹೊರಗುತ್ತಿಗೆ ನೌಕರರನ್ನು ನೇರಪಾವತಿ ಮಾಡದೆ ಗುತ್ತಿಗೆ ಪದ್ದತಿಯಲ್ಲಿಯೇ ಮುಂದುವರಿಸಿ ವಂಚಿಸಿತು. ಆದ್ದರಿಂದ ಈಗ ಅದೇ ತಪ್ಪನ್ನು ಪುನರಾವರ್ತನೆ ಮಾಡದೆ ಹೊರಗುತ್ತಿಗೆ ನೌಕರರಿಗೆ ನ್ಯಾಯ ಒದಗಿಸಬೇಕಿದೆ. ಇದಲ್ಲದೆ ನಿಯಮಾನುಸಾರ ಪೌರಕಾರ್ಮಿಕರು ಹಾಗೂ ಚಾಲಕರು ಸೇರಿದಂತೆ ಸ್ವಚ್ಛತಾ ಸಿಬ್ಬಂದಿಗೆ ಬೆಳಗಿನ ಉಪಹಾರ, ನಿವೇಶನ, ಜೀವವಿಮೆ, ಆರೋಗ್ಯ ತಪಾಸಣೆ ಸೇರಿದಂತೆ ಅಗತ್ಯ ಪರಿಕರಗಳನ್ನು ಯಾವುದೆ ವಿಳಂಬವಿಲ್ಲದೆ ಒದಗಿಸಬೇಕು. ಸಕಾಲಕ್ಕೆ ವೇತನ ನೀಡುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ನಾಗರಾಜು, ಸೋಮಸುಂದರ, ಗೌರಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net