

ಮಂಡ್ಯ: ಮಂಗಳೂರಿನ ಬಂಟ್ವಾಳದಲ್ಲಿ ವಕೀಲರ ಮೇಲಿನ ಹಲ್ಲೆ ಖಂಡಿಸಿ ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ವಕೀಲರು, ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಮಾತನಾಡಿ, ಬಂಟ್ವಾಳ ತಾಲೂಕಿನ ವಕೀಲ ಕುಲದೀಪ್‌ಶೆಟ್ಟಿ ಮೇಲೆ ಕುಂಜಾಲಕಟ್ಟೆ ಠಾಣೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ವಕೀಲರ ಮೇಲೆ ಯಾವುದೇ ಪ್ರಕರಣಗಳಿಲ್ಲ. ಯಾರದ್ದೋ ಪ್ರಚೋದನೆ ಮೇಲೆ ಕಳ್ಳತನದ ಆರೋಪ ಹೊರಿಸಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ವಕೀಲ ತನ್ನ ತಾಯಿಯನ್ನು ಬೇಡಿಕೊಳ್ಳುತ್ತ ತನ್ನನ್ನು ಬಂಧಿಸುತ್ತಿದ್ದಾರೆ. ನನ್ನನ್ನು ಬಿಡಿಸಿ ಎಂದು ಪರಿಪರಿಯಾಗಿ ಬೇಡಿದರೂ ಅರೆಬಟ್ಟೆಯಲ್ಲಿ ಕರೆದೊಯ್ದಿರುವುದು ವಕೀಲರಿಗೆ ಅವಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲೂ ನಡೆಯದಂತಹ ಅಮಾನವೀಯ ಘಟನೆ ಕುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆದ್ದರಿಂದ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಕ್ಷಣ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಕೀಲರಾದ ಮರಿಸ್ವಾಮಿ, ಸಾಕಮ್ಮ, ಉಮೇಶ್‌ಚಂದ್ರ, ಸುರೇಶ್, ಸಿ.ಬೋರೇಗೌಡ, ಸವಿತಾ, ಜಯಲಕ್ಷ್ಮೀ ಇತರರಿದ್ದರು.