ಗ್ರಾಚ್ಯುಟಿ ಪಾವತಿಸಲು ಆಗ್ರಹ: ಅಂಗನವಾಡಿ ನೌಕರರ ಧರಣಿ

01_12_Mdy_01(B(Protest)
Published on

ಮಂಡ್ಯ: ಗ್ರಾಚ್ಯುಟಿ ಪಾವತಿಸಲು ಕೂಡಲೇ ಕ್ರಮ ತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದಿಂದ ಡಿಸಿ ಕಚೇರಿ ಎದುರು ಧರಣಿ ನಡೆಯಿತು.

2022 ಏ.25ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾವಿರಾರೂ ನಿವೃತ್ತ ನೌಕರರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲವೆಡೆ ಅರ್ಜಿ ತೆಗೆದುಕೊಳ್ಳಲು ನಿರಾಕರಿಸಲಾಗಿದೆ. ಆದ್ದರಿಂದ ಅರ್ಜಿ ಸಲ್ಲಿಸಿರುವವರಿಗೆ ಕೂಡಲೇ ಪರಿಹಾರ ನೀಡಲು ಸರ್ಕಾರ ಆದೇಶ ನೀಡಬೇಕು. ಮಾತ್ರವಲ್ಲದೆ ಅನ್ನದೊಟ್ಟಿಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಬಲಿಷ್ಠಪಡಿಸಬೇಕು. ಅಂಗನವಾಡಿ ಕೇಂದ್ರದ ವೇಳಾಪಟ್ಟಿ ಬದಲಿಸಬೇಕು. ಅಂದರೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಶಿಕ್ಷಣ ನೀಡಬೇಕು. ಈ ವೇಳೆ ಸಾರ್ವಜನಿಕರ ಭೇಟಿಗೆ ಅವಕಾಶವಿರುವುದಿಲ್ಲವೆಂದು ಖಚಿತಪಡಿಸಬೇಕು. ಇನ್ನು ನೌಕರರ ಮೇಲೆ ಹೆಚ್ಚುತ್ತಿರುವ ಶಿಸ್ತು ಕ್ರಮವನ್ನು ತಪ್ಪಿಸಬೇಕು. ತಪ್ಪು ಮಾಡಿದ ಕೂಡಲೇ ನೈಸರ್ಗಿಕ ನ್ಯಾಯವನ್ನು ಒದಗಿಸದೇ ಕೆಲಸದಿಂದ ತೆಗೆಯುವ ಕ್ರಮ ಸರಿಯಲ್ಲ. ಅಂತೆಯೇ ಸರಿಯಾದ ಸಮಯಕ್ಕೆ ವೇತನ ಪಾವತಿಸಲು ಕ್ರಮ ವಹಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಪ್ರಮೀಳಾಕುಮಾರಿ, ಜಯಲಕ್ಷ್ಮಮ್ಮ, ಮಂಜುಳಾರಾಜ್, ಸಿ.ಕುಮಾರಿ, ಪುಷ್ಪಾವತಿ, ವಿಜಯ, ರೂಪಾ, ಮೀನಾಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net