ವಿದ್ಯುತ್ ಅವಘಡದಲ್ಲಿ ಇಬ್ಬರು ಫೋಟೋಗ್ರಾಫರ್ಸ್‌ ಸಾವು: ಸೂಕ್ತ ಪರಿಹಾರ ನೀಡುವಂತೆ ಸೆಸ್ಕ್ ಕಚೇರಿಗೆ ಮುತ್ತಿಗೆ

25M.D.R.4
Published on

ಮದ್ದೂರು: ಇತ್ತೀಚೆಗೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಬೆಸಗರಹಳ್ಳಿ ಗ್ರಾಮದ ಲಕ್ಷ್ಮೀ ಸ್ಟುಡಿಯೋ ಮಾಲೀಕ ಮರಳಿಗ ಗ್ರಾಮದ ವಿವೇಕ್ ಹಾಗೂ ಗೆಜ್ಜಲಗೆರೆ ಗ್ರಾಮದ ಮಧುಕುಮಾರ್ ಅವರ ಕುಟುಂಬಕ್ಕೆ ಸೆಸ್ಕ್ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮರಳಿಗ ಗ್ರಾಮಸ್ಥರು ಮತ್ತು ರೈತ ಸಂಘದ ಮುಖಂಡರು ಬೆಸಗರಹಳ್ಳಿ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಮೃತ ಛಾಯಾಗ್ರಾಹಕರ ಸಾವಿಗೆ ಸೆಸ್ಕ್ ಅಧಿಕಾರಿಗಳ ನಿರ್ಲಕ್ಷೃವೇ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸೆಸ್ಕ್ ಜೆಇ ಸಂತೋಷ ಅವರನ್ನು ತರಾಟೆಗೆ ತೆಗೆದುಕೊಂಡರು. ಮರಳಿಗ ಗ್ರಾಮದ ಮುಖಂಡ ಸ್ವಾಮಿ ಮಾತನಾಡಿ, ಸೆಸ್ಕ್ ನಿರ್ಲಕ್ಷ್ಯದಿಂದ ಇಬ್ಬರು ಛಾಯಾಗ್ರಾಹಕರು ಮೃತಪಟ್ಟಿದ್ದಾರೆ. ಸ್ಟುಡಿಯೋ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕಡುಬಡವರಾದ ವಿವೇಕ್ ಮತ್ತು ಮಧುಕುಮಾರ್ ಸಾವಿಗೆ ನ್ಯಾಯ ಸಿಗಬೇಕು. ತಕ್ಷಣವೇ ಸರ್ಕಾರ ಪರಿಹಾರ ಮಂಜೂರು ಮಾಡುವುದರ ಜತೆಗೆ ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಇಲಾಖೆಯ ಇಇ ಶಿವಕುಮಾರ್ ಮಾತನಾಡಿ, ಪರಿಹಾರ ಕೊಡುವ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಮುಖಂಡರಾದ ರಾಮೇಗೌಡ, ಜಯಲಕ್ಷ್ಮಮ್ಮ, ಹೆಗಡೆ, ಕೆಂಚಪ್ಪ, ಕಾಳೇಗೌಡ, ಶ್ರೀನಿವಾಸ, ಗೊಲ್ಲರದೊಡ್ಡಿ ಅಶೋಕ್, ವರದರಾಜು, ವೆಂಕಟೇಶ್, ತಿಮ್ಮಯ್ಯ, ಯೋಗಾನಂದ, ಸ್ವಾಮಿ, ಮರಲಿಂಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net