

ಮಂಡ್ಯ: ನೆಹರುನಗರದ ಪೌರಕಾರ್ಮಿಕರ ಕಾಲನಿಯಲ್ಲಿರುವ 28 ವಸತಿಗೃಹ ಹಾಗೂ ಹಾಲಹಳ್ಳಿ ಕೊಳಚೆ ಪ್ರದೇಶದಲ್ಲಿ ವಾಸವಿರುವ ನಿರ್ಗತಿಕರಿಗೆ ಹಾಲಿ ವಾಸವಿರುವ ಮನೆಗಳನ್ನು ಸ್ವಂತ ಮಾಡಿಕೊಡಬೇಕೆಂದು ಆಗ್ರಹಿಸಿ ಪೌರಕಾರ್ಮಿಕರ ಸಂಘದ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಸ್ವೀಪರ್ ಕಾಲನಿಯಲ್ಲಿ ಸುಮಾರು 28 ಖಾಯಂ ಪೌರಕಾರ್ಮಿಕರು ನಗರಸಭೆಯಿಂದ ನೀಡಿದ ಮನೆಗಳಲ್ಲಿ ವಾಸವಿದ್ದಾರೆ. ಆದರೆ ಮನೆಗಳು ಶಿಥಿಲಾವಸ್ಥೆಯಲ್ಲಿದ್ದು, ಜೀವ ಭಯದೊಂದಿಗೆ ಜೀವನ ನಡೆಸಲಾಗುತ್ತಿದೆ. ಈ ಸಂಬಂಧ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಗರಸಭೆ, ನಗರಪಾಲಿಕೆಯಲ್ಲಿ ವಾಸವಾಗಿರುವ ಪೌರಕಾರ್ಮಿಕರಿಗೆ ನೀಡಿರುವಂತೆ ಸ್ವಂತ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಇನ್ನು ಹಾಲಹಳ್ಳಿ ಕೊಳಚೆ ಪ್ರದೇಶದಲ್ಲಿ 632 ಮನೆ ನಿರ್ಮಿಸಲಾಗಿದೆ. ಇದರಲ್ಲಿ ಪೌರಕಾರ್ಮಿಕರು ಮತ್ತು ಇತರೆ ದಿನಗೂಲಿ ಕೆಲಸಗಾರರಿದ್ದಾರೆ. ಆದ್ದರಿಂದ ಈ ಮನೆಗಳ ಪೈಕಿ ಕೆಲವನ್ನು ನಮಗೂ ನೀಡಬೇಕೆಂದು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು, ಕಾರ್ಯಾಧ್ಯಕ್ಷ ಮಂಚಯ್ಯ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್, ಜಿಲ್ಲಾಧ್ಯಕ್ಷ ಮುಟ್ಟನಹಳ್ಳಿ ಎಂ.ಆರ್.ಮಹೇಶ್, ಕಾರ್ಯಾಧ್ಯಕ್ಷ ಎಸ್.ಅರ್ಜುನ್, ಎಂ.ಮಹದೇವ, ಮಂಡ್ಯ ಕುಮಾರ್, ಕೆ.ಮಹದೇವ, ಗುರುಮೂರ್ತಿ, ಎಂ.ಪಿ.ವಿನೋದ್ ಕುಮಾರ್ ಇತರರಿದ್ದರು.