

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ತಾಲೂಕು ಒಕ್ಕಲಿಗರ ಸಂಘದ ಕಚೇರಿ ಸಮೀಪ ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಬಂಧಿಸಿ, ಗಡಿಪಾರು ಮಾಡುವಂತೆ ಒತ್ತಾಯಿಸಿ, ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಅ.13ರಂದು ಮೈಸೂರಿನ ಮಹಿಷಾ ದಸರಾ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು, ಒಕ್ಕಲಿಗ ಸಮುದಾಯದವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಕೂಡಲೇ ಆ ವ್ಯಕ್ತಿಗಳನ್ನು ಬಂಧಿಸಿ, ಗಡಿಪಾರು ಮಾಡುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಬಳಿಕ ಭಾವಚಿತ್ರವನ್ನು ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು.
ಸಂಘದ ಉಪಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಈ ಸಮಾಜಕ್ಕೆ ಅನ್ನ ನೀಡುವ ಶ್ರಮಿಕ ಸಮುದಾಯ ಒಕ್ಕಲಿಗ ಸಮುದಾಯವಾಗಿದೆ. ಸಮುದಾಯಕ್ಕೆ ತನ್ನದೆ ಅದ ವಿಶೇಷ ಸ್ಥಾನಮಾನವಿದ್ದು,ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಾಹಿತಿ ಭಗವಾನ್ ಅವಹೇಳನಕಾರಿ ಹೇಳಿಕೆ ನೀಡಿದ್ದು, ಒಕ್ಕಲಿಗರಿಗೆ ನೋವುಂಟು ಮಾಡಿದೆ. ಜಾತಿ ಧರ್ಮದ ಹೆಸರಿಸಲ್ಲಿ ಸಮಾಜ ಸ್ವಾಸ್ಥವನ್ನು ಕದಡುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷ ಬಿ.ಕೆ.ತಿಮ್ಮರಾಜು ಮಾತನಾಡಿ, ನಾಡಿಗೆ ಒಕ್ಕಲಿಗರ ಕೊಡುಗೆ ಸಾಕಷ್ಟಿದೆ. ಅದನ್ನು ಅರ್ಥೈಸಿಕೊಳ್ಳದೆ, ಸಮುದಾಯದ ಬಗ್ಗೆ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಮದ್ಯಸ್ಥಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.
ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷ ಮಧುಸೂಧನ್, ಗ್ರಾಮಾಂತರ ಬಿಜೆಪಿ ಎಸ್ಸಿ ಜಿಲ್ಲಾಧ್ಯಕ್ಷ ಎಂ.ಎನ್.ರಾಮು, ತಾಲೂಕು ಉಪಾಧ್ಯಕ್ಷ ಜಗದೀಶ್‌ಚೌಧರಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಾಮ ನಿರ್ದೇಶಕ ಬೂದಿಹಾಲ್‌ಕಿಟ್ಟಿ, ತಾಲೂಕು ಅಧ್ಯಕ್ಷ ಆರ್.ಪ್ರಮೋದ್‌ಕುಮಾರ್, ವಕೀಲ ಎನ್.ಪಿ.ರಘುನಾಥ್, ಮುಖಂಡ ಚಂದ್ರಕುಮಾರ್, ಎಂ.ಎಂ.ಗೌಡ, ರಂಗನಾಥ್, ಯಂಟಗಾನಹಳ್ಳಿ ಭೀಮರಾಜು, ಪುರುಷೋತ್ತಮ್, ಪ್ರಕಾಶ್, ಶೇಖರ್ ಇದ್ದರು.