

ಎಚ್.ಡಿ.ಕೋಟೆ: ರಸ್ತೆಬದಿ ಇದ್ದ ಬೃಹತ್ ಆಲದ ಮರ ಕಡಿದು ಹಾಕಿರುವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ರಸ್ತೆ ಬದಿಯಲ್ಲಿದ್ದ ಬೃಹತ್ ಆಲದ ಮರವನ್ನು ಕತ್ತರಿಸಿ ಪರಿಸರವನ್ನು ಹಾಳು ಮಾಡುವ ಜತೆಗೆ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರಿ ನೆರಳಾಗಿದ್ದ ಮರವನ್ನು ಅರಣ್ಯ ಮತ್ತು ಪುರಸಭೆ ಇಲಾಖೆಯ ಅಧಿಕಾರಿಗಳ ಸಹಕಾರದಲ್ಲಿ ಶಾಸಕರ ಆಪ್ತರು ಅಕ್ರಮವಾಗಿರುವ ಈ ಜಾಗವನ್ನು ಸಕ್ರಮ ಮಾಡಿಕೊಳ್ಳುವ ಉದ್ದೇಶಕ್ಕಾಗಿ ಹನನ ಮಾಡಿದ್ದಾರೆ. ಇದು ಉನ್ನತ ಮಠದಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಭೇಟಿ ನೀಡಿ, ಪ್ರತಿಭಟನೆ ಕೈಬಿಡಲು ಮಾಜಿ ಶಾಸಕರನ್ನು ಮನವೊಲಿಸಲು ಮುಂದಾದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕರು,
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಬೃಹತ್ ಆಲದ ಮರವನ್ನು ಕಡಿದಿರುವ ಬಗ್ಗೆ ಮಾಹಿತಿ ನೀಡುವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರುವುದು ವಿಳಂಬವಾದ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಿಂದ ರಸ್ತೆಯಲ್ಲಿ ಕುರ್ಚಿ ಹಾಕಿ ಕುಳಿತು ಪ್ರತಿಭಟನೆ ನಡೆಸಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು.
ರಸ್ತೆ ಬಂದ್ ಮಾಡಿ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ ವಿಚಾರ ತಿಳಿದು ತಹಸೀಲ್ದಾರ್, ಅರಣ್ಯ ಇಲಾಖೆ ಅಧಿಕಾರಿ ಹಾಗೂ ಪುರಸಭಾ ಮುಖ್ಯಾಧಿಕಾರಿ ಆಗಮಿಸಿ ರಸ್ತೆ ಸಂಚಾರ ತಡೆ ಕೈ ಬಿಡುವಂತೆ ಮನವಿ ಮಾಡಿದರು. ಇವರ ಮನವಿ ಮೇರೆಗೆ ಮಾಜಿ ಶಾಸಕರು ಶಾಮಿಯಾನ ಹಾಕಿದ ಸ್ಥಳಕ್ಕೆ ಬಂದು ಅರಣ್ಯ ಅಧಿಕಾರಿ ನಿತೀಶ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರನ್ನು ತರಾಟೆ ತೆಗೆದುಕೊಂಡರು. ಆಲದ ಮರ ಇದ್ದ ಜಾಗ ಕಂದಾಯ ಇಲಾಖೆಯದ್ದೋ? ಆಥವಾ ಪುರಸಭೆ ಜಾಗವೋ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳು ಸಮ್ಮಜಾಯಿಸಿ ನೀಡಲು ಮುಂದದಾಗ ಮಾಜಿ ಶಾಸಕರು, ಅಕ್ರಮವಾಗಿರುವ ಈ ಜಾಗವನ್ನು ಸಕ್ರಮ ಮಾಡಿಕೊಳ್ಳುವ ಉದ್ದೇಶದಿಂದ ಮರಗಳ ಹನನಕ್ಕೆ ಸಹಕರಿಸಿದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಹಸೀಲ್ದಾರ್ ಶ್ರೀನಿವಾಸ ಮಾತನಾಡಿ, ಈ ಸಂಬಂಧ ಯಾರಾದರೂ ದೂರು ನೀಡಿದ್ದಲ್ಲಿ ತನಿಖೆ ನಡೆಸಿ ಸತ್ಯ ಬಯಲಿಗೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತವೆ ಎಂದು ಭರವಸೆ ನೀಡಿದರು.
ಮರಗಳ ಹನನ ಹಾಗೂ ಅಕ್ರಮದ ಬಗ್ಗೆ ನಾನೇ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆಂದು ಮಾಜಿ ಶಾಸಕ ಚಿಕ್ಕಣ್ಣ ತಿಳಿಸಿ ಪಟ್ಟಣ ಮತ್ತು ತಾಲೂಕಿನ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಹೋರಾಟಗಳು ಅನಿವಾರ್ಯವಾಗಿದೆ ಎಂದು ಹೇಳಿ ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಮುಖಂಡರಾದ ರಾಜೇಂದ್ರ, ಗೋಪಾಲಸ್ವಾಮಿ, ಸಿ.ವಿ.ನಾಗರಾಜು, ನರಸಿಂಹೇಗೌಡ, ನಾಗರಾಜು, ನಂಜಪ್ಪ, ಚಾಕಳ್ಳಿ ಕೃಷ್ಣ, ಯಶ್ವಂತ್, ನಿಂಗಣ್ಣ, ಮೆಕಾನಿಕ್ ಸೂರಿ, ವಿವೇಕ, ಪ್ರಕಾಶ್, ಬಸವರಾಜು, ಗುಂಡತ್ತೂರು ಪ್ರಕಾಶ, ಮಹೇಶ, ಶಿವಯ್ಯ, ನಾಗನಾಯಕ, ಗೋವಿಂದೇಗೌಡ, ವಡ್ಡರ ಗುಡಿ ರಘು, ಮಹೇಂದ್ರ, ಕುಮಾರಸ್ವಾಮಿ, ದೊರೆಸ್ವಾಮಿ, ಬೆಳಗನಹಳ್ಳಿ ಶಿವರಾಜ್, ಸಾಗರೆ ಮಹೇಂದ್ರ, ನಾಗರಾಜು, ಚೆಲುವ, ಮಾದೇಗೌಡ, ಶಿವಕುಮಾರ್, ರಾಜೇಂದ್ರ, ಕೆ.ಎಸ್.ಗೌಡ, ಗಣೇಶ, ಮಲ್ಲೇಶ್, ಸೋಮನಾಯಕ, ಮಂಜುಶೆಟ್ಟಿ, ನಟರಾಜ್, ವೈದ್ಯನಾಥ್, ಹೆಬ್ಬಾಳ ಜವರೇಗೌಡ, ಮಹೇಶ ಇತರರು ಇದ್ದರು.