ಸಾಹಿತ್ಯದ ಮೂಲಕವೂ ಪ್ರತಿಭಟನೆ ಸಾಧ್ಯ

mng_9 sept konkani 2
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ ಆರಂಭಿಸಿರುವ ಬೋಲ್ಕಾಂವ್ ಮಾಸಿಕ ಸಾಹಿತ್ಯಾವಲೋಕನದ ಮೊದಲ ಸಭೆಯನ್ನು ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಉದ್ಘಾಟಿಸಿದರು.
Published on

ಮಂಗಳೂರು: ನಾವು ನೇರವಾಗಿ ಹೇಳಲಾಗದುದನ್ನು ಸಾಹಿತ್ಯದ ಮೂಲಕ ಹೇಳಿ ಅನ್ಯಾಯದ ವಿರುದ್ದ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಬಹುದು ಎಂದು ಕೊಂಕಣಿಯ ಪ್ರಮುಖ ಸಮಕಾಲೀನ ಕಥೆಗಾರ ಮೆಲ್ವಿನ್ ಪಿಂಟೊ ನೀರುಡೆ ಹೇಳಿದರು.

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ ಆರಂಭಿಸಿರುವ ಬೋಲ್ಕಾಂವ್ ಮಾಸಿಕ ಸಾಹಿತ್ಯಾವಲೋಕನದ ಮೊದಲ ಸಭೆಯಲ್ಲಿ ‘ಸಣ್ಣ ಕಥೆಗಳು ಮತ್ತು ನಾನು’ ಎಂಬ ವಿಷಯದ ಕುರಿತು ಮಾತನಾಡಿದರು.

ಅರುಂಧತಿ ರಾಯ್ ಅವರು ತಮ್ಮ ಎರಡನೇ ಕಾದಂಬರಿ ದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್‌ನಲ್ಲಿ ಸಾಹಿತ್ಯದ ವ್ಯಾಪ್ತಿಯಲ್ಲೇ ನಿಂತು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದ್ದಾರೆ. ಚಾ. ಫ್ರಾ. ದೆಕೊಸ್ತಾರವರು ತನ್ನ ನಾಟಕಗಳಲ್ಲಿ, ಕವಿತೆಗಳಲ್ಲಿ ಈ ಪ್ರಯತ್ನವನ್ನು ಮಾಡಿದ್ದಾರೆ. ದಲಿತ ಸಾಹಿತ್ಯದಲ್ಲೂ ನಾವು ಇದನ್ನು ಕಾಣುತ್ತೇವೆ, ಕಪ್ಪು ಸಾಹಿತ್ಯದಲ್ಲೂ ನಾವು ಇದನ್ನು ನೋಡಬಹುದು. ಇಂದು ಸಾಹಿತ್ಯಕ್ಕೆ ಬಹಳ ಮಹತ್ವವಿದೆ. ಏಕೆಂದರೆ ಇಂದು ವ್ಯಕ್ತಿಗಳು ಹೆಚ್ಚು ಹೆಚ್ಚು ಸಂಕುಚಿತರಾಗುತ್ತಿದ್ದಾರೆ ಮತ್ತು ಸ್ಪೂರ್ತಿ ಪಡೆಯುವುದು ಕಡಿಮೆಯಾಗಿದೆ. ಅಂತಹ ಸಂದರ್ಭದಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ವಾದ ಸನ್ನಿವೇಶಗಳನ್ನು ವಿವರಿಸಿದರು.

ಸಂತ ಅಲೋಶಿಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 144 ವರ್ಷಗಳ ಹಿಂದೆ ಸಂತ ಅಲೋಶಿಯಸ್ ಕಾಲೇಜು ಸ್ಥಾಪನೆಯಾದಾಗಿನಿಂದ ಕೊಂಕಣಿ ಭಾಷೆ ಮತ್ತು ವಿವಿಧ ಭಾಷಾ ಚಟುವಟಿಕೆಗಳನ್ನು ಜೆಸ್ಯೂಟ್ ಧರ್ಮಗುರುಗಳು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಬೊಲ್ಕಾಂವ್ ಮಾಸಿಕ ಸಾಹಿತ್ಯ ಮಂಚದ ಮೂಲಕ ಕೊಂಕಣಿ ಭಾಷೆಯನ್ನು ಅದರ ಸಾಹಿತಿಗಳನ್ನು ಮತ್ತು ಅವರ ಸಾಹಿತ್ಯವನ್ನು ಅನುಭವಿಸಲು ಸಾಧ್ಯವಾಗಲಿ ಮತ್ತು ಇಲ್ಲಿನ ಸಂವಾದ ಕೊಂಕಣಿ ಭಾಷೆಯ ಬೆಳವಣಿಗೆಗೆ ಸ್ಪೂರ್ತಿದಾಯಕವಾಗಲಿ ಎಂದರು.

ಕೊಂಕಣಿ ಸಂಸ್ಥೆಯ ನಿರ್ದೇಶಕ ಡಾ. ಮೆಲ್ವಿನ್ ಪಿಂಟೋ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಲ್ವಿನ್ ಡೆಸಾ, ಬೊಲ್ಕಾಂವ್ ಸಾಹಿತ್ಯ ಮಂಚದ ಸಂಚಾಲಕ ಎಚ್.ಎಂ.ಪೆರ್ನಾಲ್ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆಯ ಕಾರ್ಯ ಸಂಯೋಜಕ ಜೋಕಿಮ್ ಪಿಂಟೋ ಇದ್ದರು.

---------------------

ಅ.12 ರಂದು ಎರಡನೇ ಬೊಲ್ಕಾಂವ್ ಸಭೆ

ಬೊಲ್ಕಾಂವ್‌‘ ಮಾಸಿಕ ಸಭೆಯ ಸಂಚಾಲಕ ಎಚ್.ಎಂ.ಪೆರ್ನಾಲ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಎರಡನೇ ‘ಬೊಲ್ಕಾಂವ್‌‘ ಸಭೆ ಅ.12 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು , ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಲ್ವಿನ್ ಡೆಸಾ, ಅವರು ‘ಸಾಹಿತ್ಯ ಮತ್ತು ವಿಮರ್ಶೆ’ ಕುರಿತು ಮಾತನಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net