

ಹಾವೇರಿ: ಬಂಜಾರ ಸಮಾಜದಿಂದ ರಾಜ್ಯದಲ್ಲಿ ಆಯ್ಕೆಯಾದ ಏಕೈಕ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನಕ್ಕೆ ಆಯ್ಕೆ ಮಾಡದಿರುವ ಕಾಂಗ್ರೆಸ್ ಹೈಕಮಾಂಡ್ ನಿಲುವು ಖಂಡಿಸಿ ನಗರದ ಇಜಾರಿ ಲಕಮಾಪುರದ ಶಾಸಕರ ನಿವಾಸದ ಎದುರು ಶನಿವಾರ ಕಾಂಗ್ರೆಸ್ ಕಾರ್ಯಕರ್ತರು, ಬಂಜಾರ ಸಮುದಾಯದ ಮುಖಂಡರು, ಬೆಂಬಲಿಗರು ಪ್ರತಿಭಟನೆ ನಡೆಸಿದರು. ರುದ್ರಪ್ಪ ಅವರ ಹೆಸರನ್ನು ಸಚಿವರ ಪಟ್ಟಿಯಲ್ಲಿ ಶುಕ್ರವಾರ ಸೇರಿಸಲಾಗಿತ್ತಾದರೂ ಕೊನೆಯ ಘಳಿಗೆಯಲ್ಲಿ ಕೈಬಿಡಲಾಗಿದೆ. ಈ ನಡೆ ವಿರುದ್ಧ ಕಾರ್ಯಕರ್ತರು ತೀವ್ರ ಅಸಮಾಧಾನ ಹೊರ ಹಾಕಿದರು. ಈ ವೇಳೆ ಬಂಜಾರ ಸಮುದಾಯದ ಕುಮಾರ ನಾಯಕ ಮಾತನಾಡಿ, ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜತೆಗೆ ಈ ಬಾರಿ ಲಂಬಾಣಿ ಸಮುದಾಯದ ಮತದಾರರು ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಪರಿಣಾಮವಾಗಿ ರಾಜ್ಯದಲ್ಲಿ ಪಕ್ಷ ಬಹುಮತದತ್ತ ಬರಲು ಸಾಧ್ಯವಾಗಿದೆ. ಜಿಲ್ಲೆ ಹಾಗೂ ಬಂಜಾರ ಸಮುದಾಯದ ಕೋಟಾದಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಿ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಬಹುದಿತ್ತು ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡ ಶಂಕರ ಮೆಹರವಾಡೆ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಹಾವೇರಿ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಆಗಿದ್ದರು. ಆದರೆ, ನಮ್ಮ ಪಕ್ಷದ ಐವರು ಶಾಸಕರ ಪೈಕಿ ಒಬ್ಬರೂ ಸಚಿವರಾಗದಿರುವುದು ವಿಪರ್ಯಾಸ. ಹಾವೇರಿ ಜಿಲ್ಲೆಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾದರೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಇನ್ಮುಂದೆ ಅನ್ಯ ಜಿಲ್ಲೆಯವರು ಉಸ್ತುವಾರಿ ವಹಿಸಿಕೊಂಡರೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿದ್ದ ರುದ್ರಪ್ಪ ಲಮಾಣಿ ಅವರನ್ನು ಸಚಿವ ಸಂಪುಟದಿಂದ ವಂಚಿತರನ್ನಾಗಿಸಿರುವುದು ಬೇಸರ ಮೂಡಿಸಿದೆ ಎಂದರು.
ಪ್ರತಿಭಟನೆಯಲ್ಲಿ ರಾಕೇಶ ಫಿಲಿಪ್ ಪಿಂಟೋ, ಜಯರಾಮ ಮಾಳಾಪುರ, ಚಂದ್ರಪ್ಪ ಬೆನಕನಹಳ್ಳಿ, ನಾಗೇಶ ಕೋಡಬಾಳ, ಉಮರ್ ಇನಾಮದಾರ, ಜಾಫರ್ ಅತ್ತಾರ, ಸಯ್ಯದ್ ಉಮರ್, ರಮೇಶ ಮುದ್ನಾಳ, ಶರಣಪ್ಪ ತಳವಾರ, ಸಂತೋಷ ಲಮಾಣಿ, ರಮೇಶ ಲಮಾಣಿ, ಕಿರಣ ಲಮಾಣಿ, ಕೃಷ್ಣ ಲಮಾಣಿ, ಗುಡ್ಡಪ್ಪ ಲಮಾಣಿ, ಪ್ರಕಾಶ ಲಮಾಣಿ, ಇತರರಿದ್ದರು.