ಆಸ್ಪತ್ರೆ ಎದುರು ಮಗು ಶವವಿಟ್ಟು ಪ್ರತಿಭಟನೆ

protest
protest infront of hospital
Published on

10 ದಿನದ ಹಸುಗೂಸು ಸಾವು

ಪಾಲಕರು, ಕುಟುಂಬದವರ ಆಕ್ರಂದನ

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ವೈದ್ಯರ ನಿರ್ಲಕ್ಷ್ಯದಿಂದ ಹತ್ತು ದಿನದ ಹಸುಗೂಡು ಮೃತಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪಾಲಕರು ಹಾಗೂ ಕುಟುಂಬದವರು ಸಾರ್ವಜನಿಕ ಆಸ್ಪತ್ರೆ ಎದುರು ಮಗುವಿನ ಶವ ಇಟ್ಟು ಪ್ರತಿಭಟನೆ ನಡೆಸಿದರು. ದೊಡ್ಡಬಳ್ಳಾಪುರ ಮೂಲದ ದೇವನಹಳ್ಳಿಯಲ್ಲಿ ವಾಸವಿದ್ದ ಲಕ್ಷ್ಮೀದೇವಿ ಹಾಗೂ ಪುನೀತ್ ದಂಪತಿ ಮಗು ಮೃತಪಟ್ಟಿದೆ.
ಪ್ರಸೂತಿ ತಜ್ಞೆ ಗೈರು: ಸೆಪ್ಟೆಂಬರ್ 30 ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಕ್ಷ್ಮೀದೇವಿ ಅವರನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳಾ ಪ್ರಸೂತಿ ತಜ್ಞೆ ರಜೆ ಇದ್ದ ಕಾರಣ ಅಂದು ರಾತ್ರಿ 9ಕ್ಕೆ ದಾದಿಯರೇ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಮಗು ಅರೆಪ್ರಜ್ಞಾವಸ್ಥೆಯಲ್ಲಿದ್ದರಿಂದ ರಾತ್ರಿ 11 ಗಂಟೆ ಬಳಿಕ ಬೇರೆ ಆಸ್ಪತ್ರೆಗೆ ರವಾನಿಸುವಂತೆ ಸಿಬ್ಬಂದಿ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ. ಇದಕ್ಕೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ವೈದ್ಯಯರು ಇರುವುದಿಲ್ಲ, ದಾದಿಯರೇ ಪ್ರಸೂತಿ ಮಾಡಿಸುತ್ತಿದ್ದಾರೆ. ಇದರಿಂದ ಇಂಥ ಘಟನೆಗಳು ನಡೆಯುತ್ತಿವೆ ಎಂದು ಸಮಾಜ ಸೇವಕಿ ಸುಜಾತಾ ಆರೋಪಿಸಿದ್ದಾರೆ.
ರಜೆ ಇದ್ದ ಕಾರಣ ಸಹೋದ್ಯೋಗಿ ಪುರುಷ ವೈದ್ಯರು ಹೆರಿಗೆ ಮಾಡಿಸಿದ್ದಾರೆ, ಹೆರಿಗೆ ವೇಳೆಯೇ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ತಿಳಿದುಬಂದಿದೆ ಎಂದು ಪ್ರಸೂತಿ ತಜ್ಞೆ ಡಾ.ಮಮತಾ ಪ್ರತಿಕ್ರಿಯಿಸಿದ್ದಾರೆ.
ಭರವಸೆ ಬಳಿಕ ಪ್ರತಿಭಟನೆ ವಾಪಸ್: ತಾಲೂಕು ವೈದ್ಯಾಧಿಕಾರಿ ಡಾ. ಸಂಜಯ್ ಸ್ಥಳಕ್ಕೆ ಭೇಟಿ ನೀಡಿ, ಕರ್ತವ್ಯದಲ್ಲಿದ್ದ ನರ್ಸಿಂಗ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿದರು. ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಜರುಗಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆದರು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net