

ತುಮಕೂರು: ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಲಘುವಾಗಿ ಮಾತನಾಡಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಉಚ್ಛಾಟಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗಾಂಧೀಜಿ ವಿರುದ್ಧ ಬಾಯಿಹರಿಬಿಟ್ಟಿರುವ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ನಗರದ ಭದ್ರಮ್ಮ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅನಂತಕುಮಾರ್ ಹೆಗಡೆ ಪ್ರತಿಕೃತಿ ದಹಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಮಕೃಷ್ಣ, ಸಿಎಎ, ಎನ್‌ಆರ್‌ಸಿ ಕಾಯ್ದೆ ಜಾರಿಗೆ ತಂದು ರಾಷ್ಟ್ರ ಇಬ್ಭಾಗ ಮಾಡಿರುವ ಬಿಜೆಪಿ ತನ್ನ ರಹಸ್ಯ ಕಾರ್ಯಸೂಚಿಯನ್ನು ಜಾರಿಗೆ ತರಲು ಹುನ್ನಾರ ನಡೆಸಿದೆ. ಅನಂತಕುಮಾರ್ ಹೆಗಡೆ ಅವರು ಮಹಾತ್ಮಗಾಂಧಿ ಅವರನ್ನು ಮಧ್ಯವರ್ತಿಗಳು ಎಂದು ಹೇಳಿರುವ ಹಿಂದೆ ದುರುದ್ದೇಶ ಅಡಗಿದೆ ಎಂದರು.
ಗಾಂಧೀಜಿ ತತ್ವ ಸಿದ್ಧಾಂತ ಓದಲಿ: ಮಹಾತ್ಮಗಾಂಧಿ ಬಗ್ಗೆ ಗೊತ್ತಿಲ್ಲದೆ ಅನಂತಕುಮಾರ್ ಹೆಗಡೆ ಏನೇನೋ ಹೇಳುತ್ತಿದ್ದಾರೆ. ಮೊದಲು ಅವರು ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಓದುವುದು ಅತ್ಯವಶ್ಯಕ ಎಂದು ಪಾಲಿಕೆ ಮೇಯರ್ ಫರಿದಾಬೇಗಂ ಹೇಳಿದರು. ಭಾರತಕ್ಕೆ ಇರುವುದು ಒಬ್ಬರೇ ರಾಷ್ಟ್ರಪಿತ. ಅದು ಮಹಾತ್ಮಗಾಂಧಿ ಮಾತ್ರ. ಅವರನ್ನು ಬಿಟ್ಟರೆ ಬೇರೆ ಯಾರೂ ಮಹಾತ್ಮರಾಗಲು ಸಾಧ್ಯವಿಲ್ಲ. ಹೊಗಳಿಕೆ ಮೂಲಕ ಭಾರತದಲ್ಲಿ ಇನ್ನೊಬ್ಬರನ್ನು ರಾಷ್ಟ್ರಪಿತ ಮಾಡಲು ಹೋದರೆ ಅದು ಸಾಧ್ಯವೂ ಇಲ್ಲ, ಅವರನ್ನು ಜನರು ಒಪ್ಪುವುದಿಲ್ಲ ಎಂದರು.
ಮಾಜಿ ಶಾಸಕ ಆರ್.ನಾರಾಯಣ್, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಗೀತಾ, ಜಿ.ಡಿ.ವಿಜಯಕುಮಾರ್, ನರಸಿಂಹಮೂರ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೋ ರಾಜು, ಮೆಹಬೂಬ್ ಪಾಷ, ಪಾಲಿಕೆ ಸದಸ್ಯ ಮಹೇಶ್, ಒಬಿಸಿ ಅಧ್ಯಕ್ಷ ಪುಟ್ಟರಾಜು, ಗೀತಾ, ಮಂಜುನಾಥ, ಚಾಂದ್ ಪಾಷ, ಹಫೀಜ್, ರಾಜಣ್ಣ, ಶ್ರೀನಿವಾಸ್, ರುದ್ರೇಶ್, ವೈ.ಎನ್.ನಾಗರಾಜು, ಗಿರಿಜಾಂಬ, ಸುಜಾತಾ ಮತ್ತಿತರರು ಭಾಗವಹಿಸಿದ್ದರು.