

ತುಮಕೂರು: ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿರುವುದನ್ನು ಕೈಬಿಡುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸಲಾಯಿತು.
ವಕೀಲ ಪ್ರಶಾಂತ್ ಭೂಷಣ್ ಮೇಲಿನ ನ್ಯಾಯಾಂಗ ನಿಂದನೆ ವಾಪಸ್ ಪಡೆಯಿರಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಿರಿ ಎಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದ ಪ್ರತಿಭಟನೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಒತ್ತಾಯಿಸಲಾಯಿತು.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಬಿಜೆಪಿ ಮುಖಂಡನ ದುಬಾರಿ ಬೆಲೆಯ ಹಾರ್ಲೆಡೆವಿಡ್‌ಸನ್ ಬೈಕ್ ಮೇಲೆ ಕುಳಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಬಗ್ಗೆ ಮುಕ್ತಅಭಿಪ್ರಾಯ ವ್ಯಕ್ತಪಡಿಸಿದ ವಕೀಲ ಪ್ರಶಾಂತ್ ಭೂಷಣ್ ಮೇಲಿನ ನ್ಯಾಯಾಂಗ ನಿಂದನೆ ವಾಪಸ್ ಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ದೇಶದಲ್ಲಿ ಕರೊನಾ ನೆಪಮಾಡಿಕೊಂಡು ಜನಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕೃಷಿ, ರೈತರು, ಕಾರ್ಮಿಕರನ್ನು ದಿವಾಳಿ ಮಾಡುವಂತಹ ಕೆಲಸ ನಡೆಯುತ್ತಿದೆ. ಇಂತಹ ಸಾಂಕ್ರಾಮಿಕ ರೋಗ ನ್ಯಾಯಾಂಗಕ್ಕೂ ಹಬ್ಬುತ್ತಿದೆ. ಪ್ರಶಾಂತ್ ಭೂಷಣ್ ಅಭಿಪ್ರಾಯವನ್ನು ತಪ್ಪು ವ್ಯಾಖ್ಯಾನ ಮಾಡಿ ನ್ಯಾಯಾಂಗ ನಿಂದನೆಗೆ ಗುರಿಪಡಿಸುವುದು ಸರಿಯಲ್ಲ. ಪ್ರಜಾಸತ್ತಾತ್ಮಕ ಟೀಕೆಗಳನ್ನು ಸಹಿಸಿಕೊಳ್ಳಬೇಕು ಎಂದರು.
ಸುಪ್ರೀಂಕೋರ್ಟ್ ಪೂರ್ವಗ್ರಹಪೀಡಿತವಾಗಿ ಪ್ರಶಾಂತ್ ಭೂಷಣ್ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಇದು ಅತ್ಯಂತ ಖಂಡನೀಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಹೇಳಿದರು.
ಜನಸಂಗ್ರಾಮ ಪರಿಷತ್ ಮುಖಂಡ ಪಂಡಿತ್ ಜವಾಹರ್ ಮಾತನಾಡಿ, ಸಮಸ್ಯೆಗಳ ಕುರಿತು ಮನವಿಗಳನ್ನು ಸಲ್ಲಿಸಿದರೆ ಸುಪ್ರೀಂಕೋರ್ಟ್ ತಿರಸ್ಕರಿಸುತ್ತದೆ. ಸಮಸ್ಯೆ ಏನೆಂದೂ ಕೇಳುವ ಗೋಜಿಗೆ ಹೋಗುತ್ತಿಲ್ಲ. ಹಾಗೆಯೇ ಈಗಿನ ಸರ್ಕಾರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುತ್ತಿದೆ. ನ್ಯಾಯಾಂಗವೂ ಅದೇ ಹಾದಿಯಲ್ಲಿ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ , ಪಿಕೆಎಸ್ ಜಿಲ್ಲಾ ಸಂಚಾಲಕ ಎಸ್.ಎನ್.ಸ್ವಾಮಿ, ಎಐಟಿಯುಸಿ ಪ್ರಧಾನಕಾರ್ಯದರ್ಶಿ ಗಿರೀಶ್, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಎಐಯುಟಿಯುಸಿ ಮಂಜುಳ, ನಾವು ಭಾರತೀಯರು ಸಂಘಟನೆಯ ತಾಜುದ್ದೀನ್ ಷರೀಫ್, ಕೆ.ಈ.ಸಿದ್ದಯ್ಯ ,
ಸಿ.ಅಜ್ಜಪ್ಪ, ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಕಲ್ಯಾಣಿ, ಎಐಡಿಎಸ್‌ಒ ಅಶ್ವಿನಿ, ಆವಿಷ್ಕಾರದ ಮುತ್ತುರಾಜು ಇದ್ದರು.
ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ವೈಯಕ್ತಿಕ ಹಿತಕ್ಕಾಗಿ ಹೋರಾಡುತ್ತಿಲ್ಲ. ಹಣ ಮಾಡಲೂ ಅಲ್ಲ. ಆದರೂ ನ್ಯಾಯಾಂಗ ನಿಂದನೆಯಲ್ಲಿ ಸಿಲುಕಿಸಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಪ್ರಧಾನಿ ಮಧ್ಯಪ್ರವೇಶ ಮಾಡಬೇಕಿದ್ದು ಈವರೆಗೆ ಚಕಾತವೆತ್ತಿಲ್ಲ.
ಬಿ.ಉಮೇಶ್ ಪ್ರಾಂತ ರೈತ ಸಂಘದ ಸಂಚಾಲಕ