

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಹೋಬಳಿಯ ಮುಕ್ಕಡಿಘಟ್ಟ ಗ್ರಾಮದಲ್ಲಿ ಗೋಶಾಲೆ ನಿರ್ಮಾಣಕ್ಕೆಂದು ಖಾಸಗಿ ಸಂಸ್ಥೆಗೆ ಮಂಜೂರು ಮಾಡಿರುವ ಗೋಮಾಳವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಹೋರಾಟಕ್ಕೆ ಸಜ್ಜಾಗಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರ, ಬೆಂಗಳೂರಿನ ಸಮರ್ಥನಂ ಸಂಸ್ಥೆ ಹೆಸರಿಗೆ ಗ್ರಾಮದ ಸರ್ವೇ ನಂಬರ್ 37ರಲ್ಲಿ 25 ಎಕರೆ ಜಮೀನು ಮಂಜೂರು ಮಾಡಿರುವ ಆದೇಶವನ್ನು ರಾಜ್ಯ ಪತ್ರದಲ್ಲಿ ಅಧಿಕೃತಕವಾಗಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಭಾನುವಾರ ಗ್ರಾಮಸ್ಥರು ಸಭೆ ಸೇರಿ, ಆದೇಶದ ವಿರುದ್ಧ ಹೋರಾಟ ಮಾಡಲು ಚರ್ಚೆ ನಡೆಸಿದರು.
ಗ್ರಾಪಂ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಮುಕ್ಕಡಿಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಗಮನಕ್ಕೆ ಬಾರದೆ, ನೋಟಿಸ್ ಕೂಡ ನೀಡದೆ ಜಮೀನು ಮಂಜೂರು ಮಾಡಿರುವುದು ಸರಿಯಲ್ಲ. ತಲಾತಲಾಂತರದಿಂದ ಬಡ ರೈತರು ಕುರಿ, ಮೇಕೆ, ಹಸುಗಳನ್ನು ಮೇಯಿಸಲು ಗೋಮಾಳವನ್ನೇ ಅವಲಂಬಿಸಿದ್ದಾರೆ. ಈಗ ಯಾರ ಗಮನಕ್ಕೂ ತಾರದೆ ಖಾಸಗಿ ಸಂಸ್ಥೆಗೆ ಮಂಜೂರು ಮಾಡಿರುವುದನ್ನು ಒಪ್ಪಬಾರದು. ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು ಎಂದರು.
ದಲಿತ ಸಂಘಟನೆ ಮುಖಂಡ ನಾಗರಾಜ್ ಮಾತನಾಡಿ, ಈಗಾಗಲೇ ಈ ಸರ್ವೇ ನಂಬರ್‌ನಲ್ಲಿ ಗ್ರಾಮದ ಭೂರಹಿತ ರೈತರು ನಮೂನೆ 57ರಲ್ಲಿ ಭೂ ಮಂಜೂರಾತಿಗೋಸ್ಕರ ಅರ್ಜಿ ಸಲ್ಲಿಸಿದ್ದಾರೆ. ಬಹಳ ವರ್ಷಗಳಿಂದ ಸ್ಮಶಾನ ಜಾಗದ ಮಂಜೂರಾತಿಗಾಗಿ ಮನವಿ ಸಲ್ಲಿಸಿದ್ದೇವೆ. ಸ್ಥಳೀಯರ ಬೇಡಿಕೆ ಪರಿಗಣಿಸದ ಸರ್ಕಾರ, ಸಮರ್ಥನಂ ಸಂಸ್ಥೆಗೆ ಜಮೀನು ಮಂಜೂರು ಮಾಡಿರುವುದು ಸರಿಯಲ್ಲ ಎಂದರು.
ತೂಬಗೆರೆ ಹಿತರಕ್ಷಣ ಸಮಿತಿ ಸದಸ್ಯ ಉದಯ ಆರಾಧ್ಯ ಮಾತನಾಡಿ, ಬೆಂಗಳೂರು ಮೂಲದ ಸಮರ್ಥನಂ ಸಂಸ್ಥೆಗೂ ತೂಬಗೆರೆಗೂ ಸಂಬಂಧವಿಲ್ಲ, ಗೋಮಾಳ ರಕ್ಷಣೆ ಹೋರಾಟವನ್ನು ಎಲ್ಲರೂ ಬೆಂಬಲಿಸೋಣ. ಮುಂದಿನ ದಿನಗಳಲ್ಲಿ ಈ ಕುರಿತು ಹೋರಾಟಕ್ಕೆ ತಾಲೂಕಿನ ಎಲ್ಲ ಸಂಘಟನೆಗಳು, ರೈತ ಸಂಘದ ಸಹಾಯ ಪಡೆದು ಸರ್ಕಾರದ ಗಮನ ಸೆಳೆದು ಈ ಆದೇಶ ಹಿಂಪಡೆಯುವಂತೆ ಮಾಡಬೇಕು ಎಂದರು.