ಕಾಡುಜನರ ವೇಷ ಹಾಕಿ ಪ್ರತಿಭಟನೆ

15
Published on


ಮೈಸೂರು:
ಕಬ್ಬಿನ ಎಫ್‌ಆರ್‌ಪಿ ಮರುಪರಿಶೀಲನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಮುಂದುವರಿದಿದ್ದು, ಶುಕ್ರವಾರ ಸೊಪ್ಪುಕಟ್ಟಿಕೊಂಡು ಆದಿವಾಸಿಗಳ ವೇಷದಲ್ಲಿ ಪ್ರತಿಭಟನೆ ನಡೆಸಿದರು.


ಕಾಡುಜನರ ವೇಷ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ನಮ್ಮ ಸಮಸ್ಯೆ ಪರಿಹರಿಸದೆ ಕಾಡು ಜನರಂತೆ ವರ್ತಿಸುತ್ತಿರುವ ಅಧಿಕಾರಿಗಳನ್ನು ಪ್ರಶ್ನಿಸಲು ಅವಕಾಶ ಕೊಡಿ ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಇಲ್ಲ. ಬೇರೊಂದು ಸಭೆಗೆ ಹೋಗಿದ್ದಾರೆ. ಅವರು, ಬಂದ ತಕ್ಷಣ ಕರೆತರುವುದಾಗಿ ಮನವೊಲಿಸಿದರು.

ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳ ಮಾಹಿತಿಗೆ ಸೊಪ್ಪು ಹಾಕದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ರೈತರ ಸ್ವಾಭಿಮಾನ ಕೆರಳಿಸುತ್ತಿದ್ದಾರೆ. ರಾಜ್ಯದಲ್ಲಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ 3050ಕ್ಕೆ ನಿಗದಿಗೊಳಿಸಲಾಗಿದೆ. ಆದರೆ ಇತರ ರಾಜ್ಯಗಳು 3500 ರಿಂದ 3800ಕ್ಕೂ ಹೆಚ್ಚು ದರ ನೀಡುತ್ತಿರುವಾಗ ರಾಜ್ಯ ಸರ್ಕಾರ ಮಾತ್ರ ಕಬ್ಬು ಬೆಳೆಗಾರರಿಗೆ ಮೋಸ ಮಾಡುತ್ತಿದೆ. ಕಡಿಮೆ ದರ ನಿಗದಿಯಿಂದ ರಾಜ್ಯದ 30 ಲಕ್ಷಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಅತಂತ್ರರಾಗಿದ್ದಾರೆ. 40 ಸಾವಿರ ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುವ ಕಬ್ಬು ಬೆಳೆಗಾರರಿಗಿಂತ ಸಕ್ಕರೆ ಕಾರ್ಖಾನೆಗಳ ಹಿತವೇ ಬಿಜೆಪಿಗೆ ಮುಖ್ಯವಾಗಿದೆ ಎಂದು ಕಿಡಿಕಾರಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಸಂಚಾಲಕ ಕೆ.ಆರ್.ಎಸ್.ರಾಮೇಗೌಡ, ತಾಲೂಕು ಅಧ್ಯಕ್ಷ ಲಕ್ಷ್ಮೀಪುರ ವೆಂಕಟೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ಕಾಟೂರು ಮಹದೇವಸ್ವಾಮಿ, ಚುಂಚುರಾಯನಹುಂಡಿ ಮಂಜು, ನಂಜುಂಡಸ್ವಾಮಿ, ಸಿದ್ದರಾಮ, ಬಸವರಾಜಪ್ಪ, ವರಕೂಡು ನಾಗೇಶ್, ತೆರಣಿಮುಂಟಿ ಸುರೇಶ್‌ಶೆಟ್ಟಿ, ಸಾತಗಳ್ಳಿ ಬಸವರಾಜ್, ಪಿ.ರಾಜು, ವಾಜಮಂಗಲ ಮಹದೇವು ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net