

ಸೋಮವಾರಪೇಟೆ: ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸುತ್ತಿರುವ ಜನೌಷಧ ಕೇಂದ್ರಗಳನ್ನು ಕಾಂಗ್ರೆಸ್ ಸರ್ಕಾರ ಸರ್ಕಾರಿ ಆಸ್ಪತ್ರೆ ಕಟ್ಟಡದಿಂದ ತೆರವಿಗೆ ಮುಂದಾಗಿರುವ ಕ್ರಮ ಖಂಡಿಸಿ ಮಂಡಲ ಬಿಜೆಪಿ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗ ಶುಕ್ರವಾರ ಮೌನ ಪ್ರತಿಭಟನೆ ನಡೆಯಿತು.
ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನೌಷಧ ಕೇಂದ್ರಗಳು ಬಡಜನರಿಗೆ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸುತ್ತಿದೆ. ಜನರಿಗೆ ಹೆಚ್ಚು ಅನುಕೂಲವಾಗಿರುವ ಇಂತಹ ಕೇಂದ್ರಗಳನ್ನು ಇದೀಗ ತೆರವುಗೊಳಿಸಲು ಜನವಿರೋಧಿ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ದೂರಿದರು.
ಬಡವರು ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ. ಮಡಿಕೇರಿ ಕ್ಷೇತ್ರದ ಶಾಸಕರು ಈ ಎರಡು ವರ್ಷದಲ್ಲಿ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗಳನ್ನು ಬಗೆಹರಿಸಲು ಯಾವುದೇ ಕ್ರಮ ವಹಿಸಿಲ್ಲ. ಆಸ್ಪತ್ರೆಯು ವೈದ್ಯರ ಕೊರತೆಯಿಂದ ನಲುಗುತ್ತಿದ್ದು, ಆರೋಗ್ಯ ಇಲಾಖೆಯೇ ಅನಾರೋಗ್ಯಕ್ಕೀಡಾಗಿದೆ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಜನರಿಗೆ ಉಪಯೋಗವಾಗಿರುವ ಜನೌಷಧ ಕೇಂದ್ರಗಳನ್ನು ಮೆಡಿಕಲ್ ಲಾಬಿಗೆ ಮಣಿದು ಮುಚ್ಚುವ ಹಂತಕ್ಕೆ ಕಾಂಗ್ರೆಸ್ ಸರ್ಕಾರ ಬಂದಿದೆ. ಬಡವರ ಶಾಪ ಸರ್ಕಾರಕ್ಕೆ ತಟ್ಟಲಿದೆ. ಇದೀಗ ಬಿಜೆಪಿ ವತಿಯಿಂದ ಮೌನ ಪ್ರತಿಭಟನೆ ಮಾಡಿದ್ದು, ತನ್ನ ನಿರ್ಧಾರವನ್ನು ಸರ್ಕಾರ ಹಿಂಪಡೆಯದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಕವನ್ ಕಾರ್ಯಪ್ಪ, ಯುವಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಸೊಮೇಶ್, ದರ್ಶನ್ ಜೋಯಪ್ಪ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಮೋಹಿತ್, ಜಿಲ್ಲಾ ಕಾರ್ಯದರ್ಶಿ ಆರ್.ಕೆ. ಚಂದ್ರು ಇದ್ದರು.