

ಶ್ರೀರಂಗಪಟ್ಟಣ: ಕೆಆರ್‌ಎಸ್ ತುಂಬಿದ್ದರೂ ಕಾವೇರಿ ಕಣಿವೆಯ ರೈತರ ಕೃಷಿಗೆ ಕಟ್ಟು ಪದ್ಧತಿಯಲ್ಲಿ ನಾಲೆಗಳಿಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮದ ಮೂಲಕ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನಡೆಯಿಂದ ಶೀಘ್ರ ಪತನವಾಗಲಿದೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಆಕ್ರೋಶ ಹೊರಹಾಕಿದರು.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಕಾವೇರಿ ನೀರಾವರಿ ನಿಗಮ ಹೊರಡಿಸಿರುವ ಕಟ್ಟು ಪದ್ಧತಿಯಲ್ಲಿ ನಾಲೆಗಳಿಗೆ ನೀರು ಆದೇಶ ವಿರೋಧಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾಗದೆ ನಾಲೆಗಳಲ್ಲಿ ನೀರು ಹರಿಯದೆ ರೈತಾಪಿ ಜನರು ಭೀಕರ ಬರಗಾಲ ಎದುರಿಸಿ ತಮ್ಮ ಬೆಳೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡು ನಷ್ಟ ಅನುಭವಿಸಿದರು. ಆದರೆ ಇದೀಗ ವರುಣನ ಕೃಪೆಯಿಂದ ಜಲಾಶಯ ತುಂಬಿ ಭರ್ತಿಯಾಗಿ ತಮಿಳುನಾಡಿಗೆ ಲಕ್ಷ ಲಕ್ಷ ಕ್ಯೂಸೆಕ್ ನೀರು ಪೋಲಾಗಿ ಹರಿದು ಹೋದರೂ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ನಾಟಿ ಸಮಯದಲ್ಲಿ ಕಾಯಂ ನೀರು ಕೊಡದೆ ಕಟ್ಟು ಪದ್ಧತಿಯಲ್ಲಿ ನೀರು ಕೊಡುತ್ತೇವೆ ಎನ್ನುವ ನಿಗಮದ ಆದೇಶ ಸರಿಯಲ್ಲ ಎಂದು ಕಿಡಿ ಕಾರಿದರು.
ಕಾವೇರಿ ಕಣಿವೆಯ ನಾಲೆಗಳ ಕಡೆಯಂಚಿನ ರೈತನ ಕೃಷಿ ಭೂಮಿಗಳಿಗೆ ನೀರು ತಲುಪಲು ಕಾಯಂ ನೀರು ಹರಿಸುವ ಜತೆಗೆ ನಾಲೆಗಳಲ್ಲಿನ ಹೂಳು ತೆಗೆಸಿ, ತ್ಯಾಜ್ಯ ಸ್ವಚ್ಛತೆಗೆ ಕ್ರಮ ಕೈಗೊಳ್ಳದ ಈ ಬೇಜಾವಾಬ್ದಾರಿ ಸರ್ಕಾರ, ತಮಿಳುನಾಡು ಉದ್ಧಾರ ಮಾಡಲು ತೋರುವ ಕಾಳಜಿ ನಾಡಿನ ರೈತರ ಬಗ್ಗೆ ವಹಿಸಲ್ಲ. ನಾವೂ ರೈತನ ಮಕ್ಕಳು ಎಂದು ಎದೆಯುಬ್ಬಿಸಿ ಮೆರೆಯುವ ಈ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲೆಯ ಕೃಷಿ ಮಂತ್ರಿ ಎನ್.ಚಲುವರಾಯಸ್ವಾಮಿಗೆ ಕಿಂಚಿತ್ತು ಆಡಳಿತ ಪ್ರಜ್ಞೆ ಹಾಗೂ ತಮ್ಮ ಖಾತೆಗಳ ನಿರ್ವಹಣೆ ಜ್ಞಾನದ ಅರಿವಿಲ್ಲದೆ ಮನಸೋ ಇಚ್ಚೆ ಕ್ರಮ ಜಾರಿಗೊಳಿಸಲು ಮುಂದಾಗುತ್ತಿರುವುದು ಮೂರ್ಖತನದ ಪರಮಾವಧಿ ಎಂದರು.
ಸಮಿತಿಯ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಹನಿಯಂಬಾಡಿ ನಾಗರಾಜು, ಮೇಳಾಪುರ ಜಯರಾಮೇಗೌಡ, ದೊಡ್ಡಪಾಳ್ಯ ಜಗದೀಶ್, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಸಂಘಟನಾ ಕಾರ್ಯದರ್ಶಿ ಪಾಲಹಳ್ಳಿ ರಾಮಚಂದ್ರು, ಡಿ.ಎಂ.ಮಹೇಶ್, ಬಿ.ಸಿ ಹನುಮಂತು, ಶ್ರೀಧರ್, ಹೊಸಹಳ್ಳಿ ಸ್ವಾಮಿ ಅಚ್ಚಪ್ಪನಕೊಪ್ಪಲು ಕೃಷ್ಣ, ಚಿಂದಗಿರಿಕೊಪ್ಪಲು ಕೆಂಪೇಗೌಡ ಇತರರು ಭಾಗಿಯಾಗಿದ್ದರು.