

ಸಕಲೇಶಪುರ: ಹಳೆಯ ಪಿಂಚಣಿ ಯೋಜನೆ ಜಾರಿ, ಖಾಸಗೀಕರಣದಿಂದ ರೈಲ್ವೆ ಇಲಾಖೆ ಮುಕ್ತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈಲ್ವೆ ಮಜ್ದೂರ್ ಸಂಘದ ನೇತೃತ್ವದಲ್ಲಿ ರೈಲ್ವೆ ನೌಕರರು ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಗುರುವಾರವೂ ಪ್ರತಿಭಟನೆ ನಡೆಸಿದರು.
ನೂತನ ಪಿಂಚಣಿ ಯೋಜನೆಯಿಂದ ನೌಕರರಿಗೆ ತೊಂದರೆಯಾಗಿದೆ. ನಿವೃತ್ತಿ ನಂತರ ನಿಗದಿತ ಆದಾಯವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಇದರಿಂದಾಗಿ ಸಾಕಷ್ಟು ಕುಟುಂಬಗಳು ತೀವ್ರ ಆರ್ಥಿಕ ತೊಂದರೆಗೆ ಸಿಲುಕಿವೆ. ರೈಲ್ವೆ ಇಲಾಖೆ ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿರುವುದರಿಂದ ಕೆಲಸಕ್ಕೂ ಭದ್ರತೆ ಇಲ್ಲದಂತಾಗಿದೆ. ಆದ್ದರಿಂದ ಖಾಸಗೀಕರಣ ಕೈಬಿಡಬೇಕು. ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಸಂಘದ ಸಹ ಕಾರ್ಯದರ್ಶಿ ಅಮಿತ್ ಕುಮಾರ್, ಯೋಗೇಶ್, ಗೋವಿಂದ್ ರಾಜು, ಮೋಹನ್, ಕುಮಾರ್, ಚಂದ್ರು ಇತರರಿದ್ದರು.