

ರೋಣ: ರಾಜ್ಯ ಸರ್ಕಾರವು ಬಸ್ ಪ್ರಯಾಣ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ಸೋಮವಾರ ಮುಲ್ಲಾಭಾವಿ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಎಬಿವಿಪಿ ತಾಲೂಕು ಸಂಚಾಲಕ ವೀರೇಶ ಉಳ್ಳಾಗಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಶೇ. 15ರಷ್ಟು ಬಸ್ ಪ್ರಯಾಣ ದರ ಹೆಚ್ಚು ಮಾಡುವ ಮೂಲಕ ಬಡ, ಕೂಲಿ ಕಾರ್ವಿುಕರು ಹಾಗೂ ಮಧ್ಯಮ ವರ್ಗದ ಜನತೆಗೆ ಹೊರೆ ಹೇರಿದಂತಾಗಿದೆ. ಸರ್ಕಾರಿ ಬಸ್ ಪ್ರಯಾಣವನ್ನೇ ಅವಲಂಬಿಸಿರುವ ಜನರ ಮೇಲೆ ಆರ್ಥಿಕ ಹೊರೆಯನ್ನುಂಟು ಮಾಡಿದಂತಾಗಿದೆ. ಶಕ್ತಿ ಯೋಜನೆಯಿಂದ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದು ಸರ್ಕಾರದ ಗಮನಕ್ಕಿದೆ. ನಿತ್ಯ ಶಾಲೆ-ಕಾಲೇಜುಗಳಿಗೆ ಹೋಗಿಬರುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡಲಾಗುತ್ತಿದೆ. ಬಸ್ನಲ್ಲಿ ಸ್ಥಳಾವಕಾಶ ಸಿಗುತ್ತಿಲ್ಲ. ಬಸ್ ನಿಲ್ಲಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಳೆ ಕಾಲೇಜ್ಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಬಸ್ಗಳ ಸಂಖ್ಯೆ ಹೆಚ್ಚಳ ಮಾಡಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು. ಏರಿಕೆ ಮಾಡಿರುವ ಪ್ರಯಾಣ ದರವನ್ನು ಇಳಿಸಬೇಕು ಎಂದು ಒತ್ತಾಯಿಸಿದರು. ಸಚಿನ್ ಕುಂದರಗಿ, ವಿಶ್ವ ಕುರಿ, ಶಿವಕುಮಾರ ಬಣಪ್ಪನವರ, ಹರ್ಷ ಕಟ್ಟಿ, ಶರಣಪ್ಪ ಮುದಿಗೌಡರ, ಇತರರಿದ್ದರು.