ಕಳ್ಳನ ರಕ್ಷಣೆಗೆ ನಿಂತರೇ ಪೊಲೀಸರು? ; ಪ್ರಕರಣ ದಾಖಲಿಸಲು ಹಿಂದೇಟು, ದೂರುದಾರನ ವಿರುದ್ಧವೇ ಕ್ರಮಕ್ಕೆ ಮುಂದು!

29 bgp crime news photo
Published on

ಬಾಗೇಪಲ್ಲಿ: ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಕಳ್ಳನ ವಿರುದ್ಧ ಪ್ರಕರಣ ದಾಖಲಿಸಿ, ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಬದಲು ದೂರುದಾರನ ವಿರುದ್ಧವೇ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂಬ ಆರೋಪ ತಾಲೂಕಿನ ಪಾತಪಾಳ್ಯ ಪೊಲೀಸರ ವಿರುದ್ಧ ಕೇಳಿಬಂದಿದೆ.

ಪೊಲೀಸರು ಖದೀಮನ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿ ದೇವರಮಾಕಲಪಲ್ಲಿ ಮತ್ತು ಪ್ಯಾಯಲವಾರಪಲ್ಲಿ ಗ್ರಾಮಸ್ಥರು ನ್ಯಾಯಕ್ಕಾಗಿ ಭಾನುವಾರ ಪಾತಪಾಳ್ಯ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು ಈ ವೇಳೆ ಪಾತಪಾಳ್ಯ ಪೋಲಿಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮುಕಿ ನಡೆದಿದೆ.

ಘಟನೆ ಏನು?: ಆ.26ರಂದು ಪ್ಯಾಯಲವಾರಪಲ್ಲಿಯ ಕೊಂಡಿರೆಡ್ಡಿ ಎಂಬವರ ಮನೆಯಲ್ಲಿ ಕಳವು ನಡೆದಿದ್ದು, ಇದಕ್ಕೂ ಮುನ್ನ ಮನೆಯ ಸುತ್ತಮುತ್ತ ಅದೇ ಗ್ರಾಮದ ಶ್ರೀನಿವಾಸ್ ಅನುಮಾನಾಸ್ಪದವಾಗಿ ಓಡಾಡಿರುವುದನ್ನು ಹಾಗೂ ಬೀಗ ಮುರಿದು ಮನೆ ಒಳಗೆ ನುಗ್ಗಿದ್ದನ್ನು ಅಕ್ಕಪಕ್ಕದ ಮನೆಯವರು ನೋಡಿದ್ದರು. ಕೊನೆಗೆ ಗ್ರಾಮಸ್ಥರೇ ಆತನನ್ನು ಹಿಡಿದಿದ್ದರು. ಈ ವೇಳೆ ಶ್ರೀನಿವಾಸ್ ಕದ್ದಿರುವ ಹಣವನ್ನು ವಾಪಸು ನೀಡಲು ಮುಂದಾಗಿದ್ದಾನೆ.

ಹಣ ಪಡೆಯಲು ನಿರಾಕರಿಸಿದ ಗ್ರಾಮಸ್ಥರು ಕಾನೂನು ಕ್ರಮ ಜರುಗಿಸುವಂತೆ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಆ.26 ರಂದು ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದರು. ಆದರೆ ದೂರು ಸ್ವೀಕರಿಸದ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುವ ಬದಲು ನ್ಯಾಯ ದೊರಕಿಸಿಕೊಡಿ ಎಂದು ದೂರು ನೀಡಿರುವ ಸಂತ್ರಸ್ತ ಕೊಂಡಿರೆಡ್ಡಿ ವಿರುದ್ಧವೇ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪೋಲಿಸರಿಂದ ನ್ಯಾಯ ಸಿಗದ ಕಾರಣ ದೇವರಮಾಕಲಪಲ್ಲಿ ಮತ್ತು ಪ್ಯಾಯಲವಾರಪಲ್ಲಿ ಗ್ರಾಮಸ್ಥರು ಪಾತಪಾಳ್ಯ ಪೊಲೀಸ್ ಠಾಣೆ ಮುಂದೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿ ಪೊಲೀಸರು ಧೋರಣೆ ಖಂಡಿಸಿದ್ದಾರೆ.

ಇದೇ ಮೊದಲಲ್ಲ!: ಪ್ಯಾಯಲವಾರಿಪಲ್ಲಿಯ ಶ್ರೀನಿವಾಸ್ ಎಂಬಾತ ಪಾತಪಾಳ್ಯ ಠಾಣೆ ವ್ಯಾಪ್ತಿಯ ನಾರೇಮದ್ದೇಪಲ್ಲಿ, ದೋರಣಾಲಪಲ್ಲಿ ಹಾಗೂ ಚೇಳೂರು ಠಾಣೆ ವ್ಯಾಪ್ತಿಯ ಚಾಕವೇಲು ಹಾಗೂ ಇತರ ಗ್ರಾಮಗಳಲ್ಲಿ ಮನೆ ಕಳವು ಮಾಡಿದ್ದು ಗ್ರಾಮಸ್ಥರು ಶ್ರೀನಿವಾಸ್‌ನನ್ನು ಥಳಿಸಿ ಬುದ್ಧಿ ಹೇಳಿ, ಪಾಲಕರಿಗೆ ಒಪ್ಪಿಸಿದ್ದರು. ಅಷ್ಟೇ ಅಲ್ಲದೆ ಗ್ರಾಮಸ್ಥರೇ ಮಧ್ಯಸ್ಥಿಕೆೆ ವಹಿಸಿ ರಾಜಿ-ಪಂಚಾಯಿತಿ ಮಾಡಿದ್ದರು. ಆದರೆ ಶ್ರೀನಿವಾಸ್ ತನ್ನ ಚಾಳಿ ಮುಂದುವರಿಸಿ ಸ್ವಗ್ರಾಮ ಸೇರಿ ಸುತ್ತಮುತ್ತಲ ಹಳ್ಳಿಗರಲ್ಲಿ ಅತಂಕ ಸೃಷ್ಟಿಸಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net