ರಮೇಶ್ ಕತ್ತಿ ವಿರುದ್ಧ ನಂಜನಗೂಡಿನಲ್ಲಿ ಪ್ರತಿಭಟನೆ

Oplus_16908288
ನಗರದ ಅಂಬೇಡ್ಕರ್ ವೃತ್ತದ ಬಳಿ ತಾಲೂಕು ನಾಯಕ ಸಮುದಾಯದ ಸಂಘದಿಂದ ವಾಲ್ಮೀಕಿ ನಿಗಮದ ಎಸ್.ಸಿ.ಬಸವರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
Published on

ನಂಜನಗೂಡು: ಮಾಜಿ ಸಂಸದ ರಮೇಶ್ ಕತ್ತಿ ನಾಯಕ ಸಮುದಾಯದ ಬಗ್ಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಗುರುವಾರ ತಾಲೂಕು ನಾಯಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದ ಬಳಿ ಜಮಾವಣೆಗೊಂಡ ನಾಯಕ ಸಮುದಾಯದ ಮುಖಂಡರು, ಮಾಜಿ ಸಂಸದನ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಸ್.ಸಿ.ಬಸವರಾಜು ಮಾತನಾಡಿ, ಅ.19ರಂದು ಬೆಳಗಾವಿಯಲ್ಲಿ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ನಾಯಕ ಸಮಾಜದ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದರು. ಇದು ಸಮುದಾಯಕ್ಕೆ ಬಹಳ ನೋವು ತಂದಿದೆ. ಈ ಬಗ್ಗೆ ಈಗಾಗಲೇ ಸಮುದಾಯದಿಂದ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಸಂಸದರಾದವರು ಅವರ ಕೆಲಸವನ್ನು ಮಾಡಿಕೊಂಡು ಹೋಗಬೇಕು. ಯಾವುದೇ ಸಮಾಜದ ಬಗ್ಗೆ ಈ ರೀತಿಯ ಹೇಳಿಕೆಗಳನ್ನು ನೀಡುವುದು ತಪ್ಪು. ಸಮಾಜದಲ್ಲಿ ಯಾವ ರೀತಿ ಮಾತನಾಡಬೇಕು ಎಂಬುದನ್ನು ಮೊದಲು ಅರಿಯಬೇಕು. ಜಾತಿಗಳ ನಡುವೆ ವಿಷ ಬೀಜ ಬಿತ್ತಲು ವೈಯಕ್ತಿಕ ದ್ವೇಷ ಬಳಕೆ ಮಾಡುತ್ತಿರುವುದು ಸರಿಯಾದ ನಡೆಯಲ್ಲ. ಇವರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲು ಮಾಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಕೆ.ನಾಗರಾಜು, ತಾಲೂಕು ನಾಯಕ ಸಂಘದ ಕಾರ್ಯದರ್ಶಿ ಶ್ರೀಕಂಠ ಸ್ವಾಮಿ, ದೊರೆಸ್ವಾಮಿ, ಶಿವಕುಮಾರ್, ಹಳ್ಳದಕೇರಿ ನಾಗರಾಜು, ಬಾಲು, ರಾಜುನಾಯಕ, ಮಂಜು ಸೇರಿದಂತೆ ಸಂಘದ ಸದಸ್ಯರು ಹಾಗೂ ನಾಯಕ ಸಮಾಜದ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net