

ಮೈಸೂರು: ಕೋಲ್ಕತ ಆಸ್ಪತ್ರೆ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್ ಕಾರ್ಯಕರ್ತರು, ದೇಶದಲ್ಲಿ ಅತ್ಯಾಚಾರ, ಹತ್ಯೆಯಂತಹ ಘೋರ ಕೃತ್ಯಗಳು ಮರುಕಳಿಸುತ್ತಲೇ ಇದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ವಯಸ್ಸಿನ ಮಿತಿ ಇಲ್ಲದೆ ಮಹಿಳೆಯರ ಮೇಲೆ ಅಪರಾಧಗಳು ಅವ್ಯಾಹತವಾಗಿ ನಡೆಯುತ್ತಿವೆ. ಕಳೆದ ತಿಂಗಳು ಆಂಧ್ರಪ್ರದೇಶದಲ್ಲಿ 12-13 ವರ್ಷದ ಮೂವರು ಶಾಲಾ ಮಕ್ಕಳು 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಅವಳನ್ನು ಕೊಂದರು. ಮುಂಬೈನಲ್ಲಿ ಕೂಡ ಇದೇ ವಯಸ್ಸಿನ ಬಾಲಕಿಯ ಮೇಲೆ ಬಾಲಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಕೋಲ್ಕತ ವೈದ್ಯಕೀಯ ಕಾಲೇಜೊಂದರಲ್ಲಿ ಕಾಮುಕನಿಗೆ ಬಲಿಯಾಗಿ ಘೋರ ಸಾವಿಗೀಡಾದ ವೈದ್ಯೆ ಈ ಪ್ರಕರಣಗಳಿಗೆ ಇನ್ನೊಂದು ಸೇರ್ಪಡೆ ಎಂದು ಬೇಸರ ತಂದಿದೆ.
ನಾಗರಿಕ ಸಮಾಜವು ತಲೆತಗ್ಗಿಸುವಂತೆ ಮಾಡಿರುವ ಈ ಅತ್ಯಾಚಾರದ ಮಾರಿ ತೀವ್ರವಾಗಿ ಎಲ್ಲೆಡೆ ಹಬ್ಬುತ್ತಿದೆ. ಈ ಮಾರಿಯ ಮೂಲ ಅಡಗಿರುವುದು ಇಂದಿನ ಸಾಂಸ್ಕೃತಿಕ ಅಧಃಪತನದಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಈಗಾಗಲೇ ಜನರು ಬೀದಿಗಿಳಿದಿದ್ದಾರೆ. ಈ ಘಟನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ದಿಕ್ಕು ತಪ್ಪಿಸುವ ಹೀನ ಪ್ರಯತ್ನವನ್ನು ಆಡಳಿತಾರೂಢ ಟಿಎಂಸಿ ಸೇರಿದಂತೆ ಪಟ್ಟಭದ್ರರು ನಡೆಸುತ್ತಿದ್ದಾರೆ. ಆದರೆ, ಸರಿಯಾದ ದಾರಿಯಲ್ಲಿ ಮುನ್ನಡೆದು ಸಂಘಟಿತ ಹೋರಾಟ ನಡೆಸುವುದರಿಂದ ಮಾತ್ರ ಪರಿಹಾರ ಸಾಧ್ಯ ಎಂದರು.
ಇಂದು ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿರುವ ಅಶ್ಲೀಲ ಸಿನಿಮಾ, ಸಾಹಿತ್ಯ ಮತ್ತು ಪೋರ್ನ್ ವೆಬ್ಸೈಟ್‌ಗಳು ಸಮಾಜದ ಸ್ವಾಸ್ಥ್ಯ ಹಾಳುಗೆಡವಿ ಸಾಂಸ್ಕೃತಿಕ ಅಧಃಪತನಕ್ಕೆ ಕಾರಣವಾಗಿವೆ. ಕೂಡಲೇ ಕರ್ತವ್ಯನಿರತ ಎಲ್ಲ ಮಹಿಳೆಯರಿಗೂ ಸೂಕ್ತ ಭದ್ರತೆ ಒದಗಿಸಬೇಕು. ಈ ಕೃತ್ಯ ಎಸಗಿರುವ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಕಾರ್ಯದರ್ಶಿ ಸುಮಾ, ಪದಾಧಿಕಾರಿಗಳಾದ ಸೀಮಾ, ನೀತುಶ್ರೀ, ಪುಷ್ಪಾ, ನಿತಿನ್ ಸ್ವಾತಿ, ಚಂದನ, ಚಂದ್ರಿಕಾ, ಹೇಮ, ದಿಶಾ, ಅಂಜಲಿ ಇತರರು ಇದ್ದರು.