

ತಾಳಿಕೋಟೆ: ಕೇಂದ್ರ ಮಾಜಿ ಸಚಿವ ವಿಜಯಪುರ ನಗರದ ಹಾಲಿ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ಕ್ರಮ ಖಂಡಿಸಿ ಮಿಣಜಗಿ ಗ್ರಾಮದಲ್ಲಿ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಶಾಸಕ ಎ.ಎಸ್. ಪಾಟೀಲ(ನಡಹಳ್ಳಿ) ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಿಣಜಗಿಯಲ್ಲಿ ಬೆಳಗ್ಗೆಯಿಂದಲೇ ಎಲ್ಲ ವ್ಯಾಪಾರಸ್ಥರು ಅಂ ಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಪ್ರತಿಭಟನೆ ಬೆಂಬಲಿಸಿದರು.
ಅಂದಾಜು 6 ಗಂಟೆಗಳ ವರೆಗೆ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರಲ್ಲದೆ, ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಗೆ ಮರು ಸೇರ್ಪಡೆ ಮಾಡಿಕೊಳ್ಳದಿದ್ದರೆ ಹಿಂದು ಸಮಾಜ ಬಿಜೆಪಿಯಿಂದ ಸಂಪೂರ್ಣ ಹಿಂದೆ ಸರಿಯಲಿದೆ ಎಂದು ಎಚ್ಚರಿಸಿದರು.
ಮಿಣಜಗಿ ಗ್ರಾಮದ ದ್ವಾರ ಬಾಗಿಲಿನಿಂದ ಆರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆ ವಿವಿಧ ಮಾರ್ಗಗಳಲ್ಲಿ ಹಾಯ್ದು ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಅಲ್ಲಿ ಬಹಿರಂಗ ಸಭೆ ನಡೆಸಿದರು.
ಜಿಪಂ ಮಾಜಿ ಅಧ್ಯಕ್ಷ ಪ್ರಭುಗವಡ ದೇಸಾಯಿ ಮಾತನಾಡಿ, ಬಸನಗೌಡ ಪಾಟೀಲ(ಯತ್ನಾಳ) ಅವರು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಹೈಕಮಾಂಡ್ ಯಾರದೋ ಮಾತು ಕೇಳಿ ಉಚ್ಚಾಟಿಸಿರುವುದು ಸರಿಯಲ್ಲ ಎಂದರಲ್ಲದೆ, ಯತ್ನಾಳರಿಗೆ ಕರ್ನಾಟಕದ ಹಿಂದು ಹುಲಿ ಎಂದು ಜನರೇ ಬಿರುದು ಕೊಟ್ಟಿದ್ದಾರೆ. ಅಂತವರ ಕುರಿತು ಹಗುರವಾಗಿ ಮಾತನಾಡಿದ ಎ.ಎಸ್. ಪಾಟೀಲ ನಡಹಳ್ಳಿ ವಿರುದ್ಧ ಹರಿಹಾಯ್ದರಲ್ಲದೆ, ಮುದ್ದೇಬಿಹಾಳದಲ್ಲೇ ಲಕ್ಷ ಜನರನ್ನು ಸೇರಿಸಿ ಬೃಹತ್ ಹೋರಾಟ ಮಾಡಿ ತೋರಿಸುತ್ತೇವೆ. ಬೇಕಿದ್ದರೆ ಮಾಜಿ ಶಾಸಕ ನಡಹಳ್ಳಿ ಬಂದು ಲೆಕ್ಕ ಹಾಕಿಕೊಳ್ಳಲಿ, ಈಗಾಗಲೇ ನಡಹಳ್ಳಿಯವರಿಗೆ ಚುನಾವಣೆ ಸೋಲಿಸಿ ತೋರಿಸಿದ್ದೇವೆ. ಯತ್ನಾಳ ಅವರ ಬಗ್ಗೆ ನಾಲಿಗೆ ಹರಿಬಿಟ್ಟರೆ ಇನ್ನೊಮ್ಮೆ ಮಾಡಿ ತೋರಿಸಬೇಕಾಗುತ್ತದೆ ಎಂದರು.
ಕೇಂದ್ರದ ನಾಯಕರು ಯತ್ನಾಳ ಅವರ ಉಚ್ಚಾಟನೆ ಪರಿಶೀಲಿಸಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಮುಖಂಡರಾದ ಸುರೇಶ ಹಜೇರಿ ಮಾತನಾಡಿ, ಯತ್ನಾಳರ ಬಗ್ಗೆ ಮಾತಾಡಿದರೆ ನಾನೇ ದೊಡ್ಡವನಾಗುತ್ತೇನೆಂದು ನಡಹಳ್ಳಿ ತಿಳಿದುಕೊಂಡಿದ್ದರೆ, ಅದನ್ನು ಬಿಡಬೇಕು. ನಡಹಳ್ಳಿಯವರು ಹಿಂದುತ್ವ ಮರೆತಿದ್ದಕ್ಕೆ ಮಾಜಿ ಆಗಿದ್ದಾರೆ ಎಂದರು.
ಮುಖಂಡ ಮಡುಸಾಹುಕಾರ ಬಿರಾದಾರ, ವಿರೇಶಗೌಡ ಹಡ್ಲಗೇರಿ, ಮಿಣಜಗಿ ಗ್ರಾಮದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.