

ಕೆ.ಆರ್.ಪೇಟೆ: ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದಿರುವುದು ಸರಿಯಲ್ಲ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ಗ್ರಾಮೀಣ ಭಾಗದ ರೈತರಿಗೆ ಬೇಕಾದ ಎಲ್ಲ ಪ್ರಮಾಣಪತ್ರಗಳು ಸೇರಿದಂತೆ ಭೂಮಿಗೆ ಸಂಬಂಧಪಟ್ಟ ಸೇವೆಗಳನ್ನು ಮನೆ ಬಾಗಿಲಿಗೆ ಹೋಗಿ ಸ್ಪಂದಿಸುವ ಮೂಲಕ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಇವರಿಗೆ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಎರಡನೇ ಬಾರಿ ಮುಷ್ಕರ ಕೈಗೊಂಡಿರುವುದು ಬೇಸರದ ಸಂಗತಿ. ಕೂಡಲೇ ಸಮಸ್ಯೆಗಳನ್ನು ಸರ್ಕಾರ ಶೀಘ್ರ ಬಗೆಹರಿಸಬೇಕು. ಗುಣಮಟ್ಟದ ಮೊಬೈಲ್, ಲ್ಯಾಪ್‌ಟಾಪ್, ಇಂಟರ್‌ನೆಟ್ ವ್ಯವಸ್ಥೆ, ಕಚೇರಿಗೆ ಪೀಠೋಪಕರಣಗಳ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳು ಅಗತ್ಯವಾಗಿದೆ. ಈ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಮನ್ಮುಲ್ ನೂತನ ನಿರ್ದೇಶಕ ಎಂ.ಬಿ ಹರೀಶ್ ಮಾತನಾಡಿದರು. ಜಿಪಂ ಮಾಜಿ ಸದಸ್ಯ ರಾಮದಾಸ್, ಹಾದನೂರು ಪರಮೇಶ್, ಗೊರವಿ ಶ್ರೀಧರ್, ಕೈಗೋನಹಳ್ಳಿ ಜಯರಾಂ, ಜಾಗಿನಕೆರೆ ಅಂಬರೀಶ್, ಶೀಳನೆರೆ ಅಜಯ್ ಇದ್ದರು.