

ಮಂಡ್ಯ: ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊತ್ತತ್ತಿ ಗ್ರಾಮದಲ್ಲಿ ರೈತ ಸೋಮಶೇಖರ್ ಎಂಬುವರಿಗೆ ಸೇರಿದ ಕೃಷಿ ಜಮೀನು ವಕ್ಫ್ ಬೋರ್ಡ್ ಹೆಸರಿಗೆ ಖಾತೆಯಾಗಿರುವುದನ್ನು ವಿರೋಧಿಸಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗ್ರಾಮದ ಬ್ಯಾಲಕಮ್ಮ ದೇವಾಲಯದ ಆವರಣದಲ್ಲಿ ಜಮಾಯಿಸಿದ ರೈತರು, ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಕೆರೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಕೆಲ ಮುಸ್ಲಿಂ ವ್ಯಕ್ತಿಗಳು ಸಣ್ಣದಾದ ದರ್ಗಾ ನಿರ್ಮಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವೆ ನಂಬರ್ 237ರಲ್ಲಿದ್ದ ಮೂರು ಎಕರೆ ಜಮೀನನ್ನು ವಕ್ಫ್ ಬೋರ್ಡ್‌ಗೆ ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ನೂರಾರು ವರ್ಷದ ಹಿಂದೆ ಈ ಜಾಗ ಸೋಮಶೇಖರ್ ಅವರಿಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದೆ. ಹೀಗಿರುವಾಗ ಜಮೀನು ವಕ್ಫ್ ಬೋರ್ಡ್ ಹೆಸರಿಗೆ ಖಾತೆಯಾಗಿದೆ. ಈ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡುವಂತೆ ಸಚ್ಚಿದಾನಂದ ಬಳಿ ಮನವಿ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಕರೆ ಮಾಡಿದ ಸಚ್ಚಿದಾನಂದ ರೈತ ಸೋಮಶೇಖರ್‌ಗೆ ಆಗಿರುವ ಅನ್ಯಾಯದ ಬಗ್ಗೆ ಮಾಹಿತಿ ನೀಡಿದರು. ಮಾತ್ರವಲ್ಲದೆ ಖುದ್ದಾಗಿ ಉಪವಿಭಾಗಾಧಿಕಾರಿ, ತಹಸೀಲ್ದಾರ್, ವಿಎ, ಆರ್‌ಐ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದರು. ಬಳಿಕ ಗ್ರಾಮಸ್ಥರಿಗೆ ಮಾಹಿತಿ ನೀಡಿದ ಸಚ್ಚಿದಾನಂದ, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡೋಣ. ಉಳಿದಂತೆ ಯಾವುದೇ ರಾಜಕೀಯ ಬೇಡ. ರೈತ ಸೋಮಶೇಖರ್ ಹಾಗೂ ಗ್ರಾಮಕ್ಕೆ ಆಗಿರುವ ಅನ್ಯಾಯದ ಬಗ್ಗೆ ಈಗ ಎಲ್ಲರೂ ಒಟ್ಟಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಒಂದಾಗಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಜಮೀನು ಮಾಲಿಕ ಸೋಮಶೇಖರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯೋಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ಜವರೇಗೌಡ, ಸದಸ್ಯ ಚೇತನ್, ಉದ್ಯಮಿ ಮಹೇಶ್, ತಾಪಂ ಮಾಜಿ ಉಪಾಧ್ಯಕ್ಷ ಭಾಸ್ಕರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೇವಿನಹಳ್ಳಿ ಮಹೇಶ್, ಮುಖಂಡರಾದ ಸುಖೇಂದ್ರ, ಪ್ರದೀಪ ಇತರರಿದ್ದರು.