

ಕೊಪ್ಪಳ: ವಿಶ್ವಕರ್ಮ ಸಮುದಾಯಕ್ಕೆ ಎಸ್ಟಿ ಮೀಸಲು ಕಲ್ಪಿಸುವಂತೆ ಒತ್ತಾಯಿಸಿ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹೋರಾಟ ನಡೆಸಿದರು.
ಹೋರಾಟ ಸಮಿತಿ ಅಧ್ಯಕ್ಷ ಜಯರಾಂ ಪೆ ಪತ್ತಾರ ಮಾತನಾಡಿ, ಇನ್ನೊಬ್ಬರಿಗಾಗಿ ದುಡಿವ ಶ್ರಮ ಸಮುದಾಯ ವಿಶ್ವಕರ್ಮ. ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದೆ. 2ಎ ಸಾಕು, ಎಸ್ಟಿ ಬೇಕು ಹೋರಾಟ ಹಮ್ಮಿಕೊಂಡಿದ್ದೇವೆ. ಸರ್ಕಾರ ಅಧ್ಯಯನ ವರದಿ ಪಡೆದು ನಮಗೆ ನ್ಯಾಯ ಕೊಡಬೇಕು. ವಿಶ್ವಕರ್ಮ ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ, ಕೊಪ್ಪಳ ನಗರದಲ್ಲಿ ಮೌನೇಶ್ವರ ದೇವಸ್ಥಾನ ನಿಮಾರ್ಣ ಮಾಡಲು ಸರ್ಕಾರದಿಂದ ಜಾಗ ಹಾಗೂ ಒಂದು ಕೋಟಿ ರೂ. ಅನುದಾನ ನೀಡಬೇಕು. ಕೈಗಾರಿಕೆ ನಿವೇಶನ ನೀಡುವಿಕೆ. ಸಾಲ ಸೌಲಭ್ಯ ಹೆಚ್ಚಳ ಸೇರಿ ಪ್ರಮುಖ 15 ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಸಮುದಾಯದ ಮುಖಂಡರಾದ ಪ್ರಭಾಕರ್ ಬಡಿಗೇರ್, ಚಂದ್ರಶೇಖರ್ ಬಡಿಗೇರ್, ವೀರಭದ್ರಪ್ಪ ಬಡಿಗೇರ್, ಮೌನೇಶ್ ಮಾದಿನೂರ್, ಎಚ್ಚರೇಶ ಹೊಸಮನಿ, ಪ್ರಶಾಂತ್ ವಿಶ್ವ ಬ್ರಾಹ್ಮಣ, ಮೌನೇಶ್ ಬಡಿಗೇರ್ ಕೊಪ್ಪಳ, ವೀರೇಶ್ ಕಮ್ಮಾರ್, ಕೃಷ್ಣ ಬಡಿಗೇರ್, ಮಹೇಶ್ ಬೇವಿನಹಳ್ಳಿ, ಬಸವರಾಜ ಇರಕಲ್ಲಗಡ, ಈರಣ್ಣ ಕಲ್ಲತಾವರಗೇರ, ವಿರುಪಾಕ್ಷಿ ಹಿರೇಬೊಮ್ಮನಾಳ, ಶಂಕರ್ ಗುನ್ನಾಳ ಇತರರಿದ್ದರು.