ಹೊನ್ನಾವರದಲ್ಲಿ ಪ್ರತಿಭಟನೆ ಮೇ 26ರಂದು

HNR Sharavati
Published on

ಹೊನ್ನಾವರ: ಶರಾವತಿ ಪಂಪ್ ಸ್ಟೋರೇಜ್ ಹಾಗೂ ಶರವತಿ ನದಿ ತಿರುವು ಯೋಜನೆಯ ವಿರುದ್ಧ ಪಟ್ಟಣದಲ್ಲಿ ಮೇ 26ರಂದು ಬೃಹತ್ ಪ್ರತಿಭಟನೆ ನಡೆಸುವ ಕುರಿತು ಪಟ್ಟಣದ ಪ್ರಭಾತನಗರದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಮಂಗಳವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘಟನೆ, ಪಕ್ಷಗಳ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರ ಈ ಯೋಜನೆಯನ್ನು ಕೈಬಿಡುವುದಾಗಿ ಲಿಖಿತವಾಗಿ ಘೋಷಿಸುವವರೆಗೂ ಹೋರಾಟ ನಡೆಸಬೇಕು ಎಂದು ತೀರ್ಮಾನಿಸಿದರು.

ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಸುನೀಲ ನಾಯ್ಕ, ಶರಾವತಿ ಆರತಿ ಸಮಿತಿ ಅಧ್ಯಕ್ಷ ವೆಂಕಟ್ರಮಣ ಹೆಗಡೆ, ಜಿ.ಜಿ. ಶಂಕರ, ಪ.ಪಂ. ಅಧ್ಯಕ್ಷ ನಾಗರಾಜ ಭಟ್ಟ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ವಕೀಲ ವಿಕ್ರಮ ನಾಯ್ಕ, ಎಂ.ಎನ್. ಸುಬ್ರಹ್ಮಣ್ಯ, ಜಿ.ಎನ್.ಗೌಡ, ಚಂದ್ರಕಾಂತ ಕೊಚರೇಕರ್, ಡಾ. ಜಿ.ಪಿ.ಪಾಠಣಕರ, ವಿನೋದ ನಾಯ್ಕ ಇತರರಿದ್ದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರಾವತಿ ಆರತಿ ಸಮಿತಿ ಗೌರವಾಧ್ಯಕ್ಷ ಜೆ.ಟಿ.ಪೈ, ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಮತ್ತು ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಹೋರಾಡಲು ಸಭೆಯಲ್ಲಿ ಪಕ್ಷಾತೀತವಾಗಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಮೇ 26ರಂದು ನಡೆಯುವ ಪ್ರತಿಭಟನೆಗೆ ಪೂರ್ವಭಾವಿಯಾಗಿ ಜನಜಾಗೃತಿ ಮೂಡಿಸಲು ಮೇ 21 ಮತ್ತು 22ರಂದು ಎರಡೂ ದಂಡೆಗಳ ವ್ಯಾಪ್ತಿಗಳಲ್ಲಿ ಪಾದಯಾತ್ರೆ ನಡೆಸಲಾಗುವುದು. ಗೇರುಸೊಪ್ಪದಲ್ಲಿ ಶಾಸಕ ದಿನಕರ ಶೆಟ್ಟಿ, ನಗರಬಸ್ತಿಕೇರಿಯಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ ಪಾದಯಾತ್ರೆಗೆ ಚಾಲನೆ ನೀಡುವರು ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಜನರ ಕಷ್ಟವನ್ನು ಕೇಳುವವರಿಲ್ಲ. ಇದು ಹೊನ್ನಾವರ ತಾಲೂಕಿನ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಬೇರೆಯವರಿಗೆ ವೈಯಕ್ತಿಕವಾಗಿ ಲಾಭ ಆಗಲಿದೆ ಎಂದು ಸುಮ್ಮನಿರಲಾಗದು. ಸರ್ಕಾರ ಯೋಜನೆಯನ್ನು ಕೈಬಿಡುವ ತನಕ ಪಕ್ಷಾತೀತವಾಗಿ ಹೋರಾಟ ನಡೆಯಲಿದೆ. ಎಲ್ಲರು ಒಗ್ಗೂಡಿ ಹೋರಾಟ ಮಾಡಲಾಗುವುದು ಎಂದರು.

ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಸರ್ಕಾರವು ಜಿಲ್ಲೆಗೆ ಅನ್ಯಾಯ ಮಾಡುತ್ತಿದೆ. ಯಾವುದೇ ಜನ ವಿರೋಧಿ ಯೊಜನೆ ಬಂದರೂ ಉತ್ತರ ಕನ್ನಡ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದು ಇಲ್ಲಿಯ ಜನರಿಗೆ ಮಾಡುತ್ತಿರುವ ದ್ರೋಹ. ಕೈಗಾ, ವಾಣಿಜ್ಯ ಬಂದರು ಸೇರಿದಂತೆ ವಿವಿಧ ಯೋಜನೆಯ ಮೂಲಕ ಜನರಿಗೆ ತೊಂದರೆ ನೀಡಲಾಗುತ್ತಿದೆ. ಜನವಿರೋಧಿ ಯೋಜನೆಯ ವಿರುದ್ಧ ಪಕ್ಷಾತೀತವಾಗಿ ನಿರಂತರ ಹೋರಾಟ ಮಾಡಬೇಕಿದೆ ಎಂದರು.

ಶಿವಮೊಗ್ಗದ ಅಖಿಲೇಶ ಚಿಪ್ಪಳಿಗೆ ಮಾತನಾಡಿ, 2019ರಲ್ಲಿ ಜಾರಿಗೆ ಬಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆಯು ಮಾರಕವಾಗಿದೆ. ಹೋರಾಟದಲ್ಲಿ ಶಿವಮೊಗ್ಗದಿಂದ ಜನರು ಬಂದು ಪಾಲ್ಗೊಳ್ಳಲಿದ್ದೇವೆ. ಶಿವಮೊಗ್ಗ ಜಿಲ್ಲೆ ಹಾಗೂ ಹೊನ್ನಾವರ ತಾಲೂಕಿಗೆ ಈ ಯೋಜನೆ ಮಾರಕವಾಗಿದೆ. ಹೋರಾಟ ನಡೆಸೋಣ ಎಂದರು.

ಮುಖಂಡರಾದ ಎನ್.ಎಸ್. ಹೆಗಡೆ ಕರ್ಕಿ, ಕೇಶವ ನಾಯ್ಕ ಬಳಕೂರು, ಸುರೇಶ ಹೊನ್ನಾವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net