ಒತ್ತುವರಿ ತೆರವಿಗೆ ಒತ್ತಾಯ: ಹಲ್ಲೇಗೆರೆಯಲ್ಲಿ ಗ್ರಾಮಸ್ಥರ ಪ್ರತಿಭಟನೆ

Protest in Hallegere village Mandya
Published on

ಮಂಡ್ಯ: ತಾಲೂಕಿನ ಹಲ್ಲೇಗೆರೆ ಸಂತೇಮಾಳ ಸ್ಥಳ ಮತ್ತು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಹಲ್ಲೆಗೆರೆ ಮತ್ತು ಚಂದಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ರಸ್ತೆ ಸಂಚಾರ ತಡೆದು ಧರಣಿ ನಡೆಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಮಾತನಾಡಿ, ಎರಡು ವರ್ಷದಿಂದಲೂ ಶಿರಾ ಮತ್ತು ಮಂಡ್ಯ ರಾಜ್ಯ ಹೆದ್ದಾರಿ ರಸ್ತೆ ಕೆಲಸ ಮಾಡುತ್ತಿದ್ದಾರೆ. ಆದರೆ ರಸ್ತೆ ದುರಸ್ತಿ ಕಾರ್ಯ ಮಾತ್ರ ಪರಿಪೂರ್ಣವಾಗಿಲ್ಲ. ಗ್ರಾಮದ ಸಂತೇಮಾಳವನ್ನು ಕಡೆಗಣಿಸಿ ಅದರ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಉತ್ತಮ ರಸ್ತೆ ನಿರ್ಮಿಸುವ ಮೂಲಕ ರಾಜ್ಯ ಹೆದ್ದಾರಿಯಲ್ಲಿ ಮುಕ್ತವಾಗಿ ಸಂಚಾರ ಮಾಡಲು ಅವಕಾಶ ಮಾಡಿಕೊಡಬೇಕು. ಈಗ ನಕಲಿ ಆರ್‌ಟಿಸಿ ಸೃಷ್ಟಿಸಿಕೊಂಡಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ತಕ್ಷಣವೇ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಮುಖಂಡ ಹಲ್ಲೇಗೆರೆ ಹರೀಶ್ ಮಾತನಾಡಿ, ರಸ್ತೆ ಅಭಿವೃದ್ಧಿಯಾಗಿದೆ ಎಂದು ನಮ್ಮ ಭಾಗದ ರಸ್ತೆಯ ಹಣವನ್ನು ಗುತ್ತಿಗೆದಾರ ತೆಗೆದುಕೊಂಡಿದ್ದಾನೆ. ನಿಜವಾಗಲೂ ರಸ್ತೆ ಒತ್ತುವರಿಯಾಗಿದ್ದರೆ ಅವರಿಗೆ ಪರಿಹಾರ ನೀಡಬೇಕು. ಜತೆಗೆ ಒತ್ತುವರಿ ಮಾಡಿಕೊಂಡಿರುವ ಕಡೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮುಖಂಡ ಚಲ್ಲನಾಯಕನಹಳ್ಳಿ ಸುರೇಶ್ ಮಾತನಾಡಿ, ಎಲ್ಲಿ ಒತ್ತುವರಿಯಾಗಿದೆ ಎಂಬುದನ್ನು ತಿಳಿದು ಬಿಡಿಸಬೇಕು. ಈ ಹಿಂದೆ ಭೂ ಸ್ವಾಧೀನ ಆಗಿರುವುದನ್ನು ಬಿಟ್ಟು ಬೇರೆ ಜಾಗವನ್ನು ತೆಗೆದುಕೊಂಡಿದ್ದಾರೆ. ಅದನ್ನು ಬಿಟ್ಟು ಮೂಲ ಭೂ ಸ್ವಾಧೀನವಾಗಿರುವ ಕಡೆ ರಸ್ತೆ ನಿರ್ಮಾಣ ಮಾಡಿ ರೈತರಿಗೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಗ್ರಾ.ಪಂ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ಭಾಗ್ಯಮ್ಮ, ಮುಖಂಡರಾದ ನಿಂಗರಾಜು, ಸಿ.ಕೆ.ಪಾಪಯ್ಯ, ಕರೀಗೌಡ, ಚಲ್ಲನಾಯಕನಹಳ್ಳಿ ಶಂಕರ್, ರಾಜಣ್ಣ, ದಯಾನಂದ, ರಾಮಲಿಂಗಯ್ಯ, ಮಣಿ, ಶಶಿ, ವಿಜಯೇಂದ್ರ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net