ರಸ್ತೆ ಬಿಟ್ಟು ಕೊಡುವಂತೆ ಪ್ರತಿಭಟನೆ ; ಗುಬ್ಬಿ ಹೊಸ ಬಡಾವಣೆಯಲ್ಲಿ ವಿವಾದ

17Gubbi Photo 01
Published on

ಗುಬ್ಬಿ: ಪಟ್ಟಣದ ನಾಗಲಿಂಗೇಶ್ವರ ದೇವಾಲಯ ಸಮೀಪದ ಹೊಸ ಬಡಾವಣೆ ರಸ್ತೆ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಲು ತಾಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಸ್ಥಳೀಯರು ಹಾಗೂ ಕೆಲ ಪಪಂ ಸದಸ್ಯರು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರಮುಖ ಬಡಾವಣೆಗೆ ಓಡಾಡದಂತೆ ಮುಚ್ಚಿರುವ ರಸ್ತೆ ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡುವುದು ಅಥವಾ ಪರ್ಯಾಯ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ ತಹಸೀಲ್ದಾರ್ ಮತ್ತು ಪಪಂ ಅಧಿಕಾರಿಗಳು ರಸ್ತೆ ವಿವಾದಕ್ಕೆ ತೆರೆ ಎಳೆಯದೇ ಕಾಲಹರಣ ಮಾಡುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.

ಹೊಸ ಬಡಾವಣೆಯಲ್ಲಿ ನಿರ್ಮಿಸಲಾದ ರಸ್ತೆ ಖಾಸಗಿ ಆಸ್ತಿ ಎಂದು ಕುಟುಂಬದವೊಂದರ ಸಹೋದರರು ಸಾರ್ವಜನಿಕ ರಸ್ತೆ ಮುಚ್ಚಿದ್ದಾರೆ ಎಂದು 15 ದಿನಗಳ ಹಿಂದೆ ಗಲಾಟೆ ನಡೆದಿತ್ತು. ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡುವುದಾಗಿ ಸಮಸ್ಯೆ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಡಾ.ಪ್ರದೀಪ್‌ಕುಮಾರ್ ಹಿರೇಮಠ ಮತ್ತು ಪಪಂ ಮುಖ್ಯಾಧಿಕಾರಿ ತೀರ್ಥಪ್ರಸಾದ್ ವಾರದಲ್ಲಿ ಇತ್ಯರ್ಥ ಮಾಡುವ ಭರವಸೆ ನೀಡಿದ್ದರು. 15 ದಿನಗಳು ಕಳೆದರೂ ಸಮಸ್ಯೆ ಬಗೆಹರಿಸಿಲ್ಲ. ಪರ್ಯಾಯ ರಸ್ತೆಯನ್ನೂ ಮಾಡಿಕೊಡಲಿಲ್ಲ ಎಂದು ದೂರಿದರು.

ಪಪಂ ಮಾಜಿ ಸದಸ್ಯ ಜಿ.ಸಿ.ಲೋಕೇಶ್‌ಬಾಬು, ಸ್ಥಳೀಯ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಪಪಂ ಸದಸ್ಯರಾದ ಕುಮಾರ್, ರೇಣುಕಾಪ್ರಸಾದ್, ಶೌಕತ್‌ಆಲಿ, ವಕೀಲ ಕೆ.ಜಿ.ನಾರಾಯಣ್, ಮುಖಂಡರಾದ ಕೆ.ಆರ್.ವೆಂಕಟೇಶ್, ಭರತ್‌ಗೌಡ, ಬಾಬು, ಜಿ.ವಿ.ಮಂಜುನಾಥ್ ಇತರರು ಇದ್ದರು.

ಪ್ರತಿಭಟನೆಗೆ ಕೊನೆಗೂ ತೆರೆ : 2 ತಾಸು ವಿವಾದಿತ ರಸ್ತೆ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು ತಾಲೂಕು ಆಡಳಿತ ನಿರ್ಲಕ್ಷ್ಯಕ್ಕೆ ಧಿಕ್ಕಾರ ಕೂಗಿದರು. ಪ್ರಮುಖ 3 ಬಡಾವಣೆಗೆ ಸಂಪರ್ಕಿಸುವ ಈ ರಸ್ತೆ ಸಾರ್ವಜನಿಕರಿಗೆ ಅತ್ಯವಶ್ಯವಾಗಿದೆ. ರಸ್ತೆ ಬಳಕೆಗೆ ಅನುವು ಮಾಡಿಕೊಡಿ ಅಥವಾ ಪರ್ಯಾಯ ಮತ್ತೊಂದು ಹೊಸ ರಸ್ತೆ ನಿರ್ಮಿಸಿಕೊಡಲು ಒತ್ತಾಯಿಸಿದರು. ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಡಾ.ಪ್ರದೀಪ್‌ಕುಮಾರ್ ಹಾಗೂ ಸಿಪಿಐ ರಾಮಕೃಷ್ಣಯ್ಯ ಇದರ ಮೂಲ ದಾಖಲೆ ಪರಿಶೀಲಿಸಿ ರಸ್ತೆ ಹುಡುಕಲು 20 ದಿನಗಳ ಗಡುವು ಕೇಳಿ, ಸದ್ಯಕ್ಕೆ 8 ಅಡಿಗಳ ರಸ್ತೆ ಸಾರ್ವಜನಿಕರಿಗೆ ತಾತ್ಕಾಲಿಕ ಉಪಯೋಗ ಮಾಡಲು ರಸ್ತೆ ಮುಚ್ಚಿರುವ ಒಂದು ಕುಟುಂಬದ ಸಹೋದರರನ್ನು ಒಪ್ಪಿಸಿ ಸದ್ಯದ ಪ್ರತಿಭಟನೆಗೆ ತೆರೆ ಎಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net