ತಿತಿಮತಿ ಗ್ರಾಪಂ ಮುಂದೆ ಪ್ರತಿಭಟನೆ 26ಕ್ಕೆ

Oplus_131072
Oplus_131072
Published on

ಗೋಣಿಕೊಪ್ಪ: ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (ಆಲ್ ಇಂಡಿಯಾ ದಲಿತ್ ರೈಟ್ಸ್ ಕಮಿಟಿ) ವತಿಯಿಂದ ಆ.26ರಂದು ತಿತಿಮತಿ ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಮಾಯಮುಡಿ ರಮೇಶ್ ಶುಕ್ರವಾರ ತಿಳಿಸಿದ್ದಾರೆ.


ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಂತೆ ಬೊಗ್ಗನಹಡ್ಲು ಮತ್ತು ರೇಷ್ಮೆಹಡ್ಲು ಎಂಬ ಎರಡು ಹಾಡಿಗಳಿದ್ದು, ಈ ಹಾಡಿಗಳಲ್ಲಿ 90ಕ್ಕೂ ಹೆಚ್ಚಿನ ಆದಿವಾಸಿಗಳ ಕುಟುಂಬಗಳು ವಾಸವಾಗಿವೆ. ಈ ಹಾಡಿಗಳಲ್ಲಿ ವಾಸಿಸುವ ಜನರು ಪರಿಶಿಷ್ಟ ವರ್ಗದ ಜೇನು ಕುರುಬ ಸಮುದಾಯಕ್ಕೆ ಸೇರಿದ್ದಾರೆ.


ಈ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಯಾವುದೇ ಕುಟುಂಬಗಳಿಗೂ ಶೌಚಗೃಹ ಇರುವುದಿಲ್ಲ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮಪರ್ಕವಾಗಿಲ್ಲ. ಅಲ್ಲದೆ ಇತ್ತೀಚೆಗೆ ಮುಂಜಾನೆ ವೇಳೆ ಮನೆಯಿಂದ ಹೊರಗೆ ಬಹಿರ್ದೆಸೆಗೆ ತೆರಳುತ್ತಿದ್ದ ವೇಳೆ ಬೊಗ್ಗನಹಡ್ಲು ಹಾಡಿಯ ತಿಮ್ಮ ಎಂಬ ವ್ಯಕ್ತಿಗೆ ಕಾಡುಕೋಣ ತಿವಿದಿದ್ದು ಗಂಭೀರ ಗಾಯಗಳಿಂದ ಆತ ಈಗಾಗಲೇ ಮೈಸೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳು ಈ ಹಿಂದೆಯೇ ನಡೆದಿದೆ. ಕಾಡಾನೆ ದಾಳಿಯು ನಡೆದಿದ್ದು ಹಲವು ಆದಿವಾಸಿಗಳಿಗೆ ತೊಂದರೆಯಾಗಿದೆ.


ಈ ಹಿನ್ನಲೆಯಲ್ಲಿ ಪ್ರತಿಭಟನೆಯ ಮೂಲಕ ಮೂಲ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಬೊಗ್ಗನಹಡ್ಲು ಹಾಗೂ ರೇಷ್ಮೆಹಡ್ಲುವಿನ ಆದಿವಾಸಿಗಳಿಗೆ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿಕೊಡಬೇಕೆಂಬುದು ನಮ್ಮ ಹೋರಾಟವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಜೆ.ಜಿ.ಮಣಿ, ಜೆ.ಜಿ.ಸೀತೆ ಹಾಗೂ ಜೆ.ಎಲ್.ಗೌರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net