ಕಂದಾಯ ಇಲಾಖೆ ಕಚೇರಿ ಎದುರು ಪ್ರತಿಭಟನೆ

Protest in front of the Revenue Department office
Published on

ಸವಣೂರ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ರಸ್ತೆ ಹಾಗೂ ಕಾಲುವೆ (ಚರಂಡಿ) ಕಾಮಗಾರಿ ವಿಳಂಬ ಕುರಿತು ಆಕ್ರೋಶ ವ್ಯಕ್ತಪಡಿಸಿ, ಸಾರ್ವಜನಿಕರು ಪುರಸಭೆ ಸದಸ್ಯ ಮಹಾದೇವ ಮಹೇಂದ್ರಕರ ನೇತೃತ್ವದಲ್ಲಿ ಪಟ್ಟಣದ ಕಂದಾಯ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಪಟ್ಟಣದ 16ನೇ ವಾರ್ಡ್ ಹಾಗೂ ರಾಜಬೀದಿಗಳ ಅಭಿವೃದ್ಧಿ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಟೆಂಡರ್ ಕೈಗೊಂಡು ಸುಮಾರು ಎರಡೂವರೆ ವರ್ಷ ಕಳೆದರೂ ಕಾಮಗಾರಿ ನಡೆಸುತ್ತಿಲ್ಲ. ಏ. 1ರಂದು ಮನವಿ ಸಲ್ಲಿಸಿ 8 ದಿನಗಳ ಕಾಲ ಗಡುವು ನೀಡಲಾಗಿತ್ತು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅಭಿವೃದ್ಧಿ ಕಾಮಗಾರಿ ಆರಂಭಿಸದಿದ್ದಲ್ಲಿ ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಗೆ ಮುದ್ರಾಸನದ ಭಂಗಿಯಲ್ಲಿ ವಿನೂತನ ಪ್ರತಿಭಟನೆ ಕೈಗೊಳ್ಳಲಾಗುವುದು. ಉಪ್ಪಾರ ಓಣಿಯಲ್ಲಿ 20 ವರ್ಷಗಳ ಹಿಂದೆ ರಸ್ತೆ ಹಾಗೂ ಕಾಲುವೆ (ಗಟಾರ) ನಿರ್ವಣಕ್ಕೆ ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದರೂ, ಕಾಮಗಾರಿ ವಿಳಂಬವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ತೆರಿಗೆ ಸಂಗ್ರಹಣೆ ಹಾಗೂ ಇ-ಖಾತೆ ಮಾಡಲು ಮಾತ್ರ ಸೀಮಿತವಾಗಿದ್ದು ಅಭಿವೃದ್ಧಿ ಕಡೆಗಣಿಸುತ್ತಿದ್ದಾರೆ. ಅಮೃತ ನಗರೋತ್ಥಾನ ಕಾಮಗಾರಿ ಅಂದಾಜು ಮೊತ್ತ ಹಾಗೂ ಅಧಿಕಾರಿಗಳಿಂದ ಉಂಟಾಗುತ್ತಿರುವ ನಿರ್ಲಕ್ಷ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಪ್ರತಿಭಟನಾ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ ಮನವಿ ಸ್ವೀಕರಿಸಿದರು. ಪ್ರಮುಖರಾದ ಶ್ರೀನಿವಾಸ ಗಿತ್ತೆ, ಗಜಾನನ ರಾಶಿನಕರ, ವಿ.ವಿ. ಮಹೇಂದ್ರಕರ, ಪ್ರಶಾಂತ ತಿರುಮಲೆ, ರಾಜು ರಾಶಿನಕರ, ಎಂ.ಕೆ. ಅಳ್ನಾವರ, ಜಿ.ಎ. ಬಗರೆ, ಅಮರ ಗಿತ್ತೆ, ವಿ.ಎ. ದೇಶಮಾನೆ, ಮಂಜುನಾಥ ಬಗರೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net