ಕಚೇರಿಗೆ ಬಾರದ ಅಧಿಕಾರಿ ವಿರುದ್ಧ ಪ್ರತಿಭಟನೆ

CHN
Published on

ಚನ್ನಗಿರಿ: ಕಳೆದ ಒಂದು ವಾರದಿಂದ ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ಬರುತ್ತಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳು ಪೂರ್ಣವಾಗುತ್ತಿಲ್ಲ ಎಂದು ಆರೋಪಿಸಿ ನಲ್ಲೂರು ಗ್ರಾಮಸ್ಥರು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಲ್ಲೂರು ಗ್ರಾಮದ ಮುಖಂಡ ನೂರುಲ್ಲಾ, ಸರ್ಕಾರ ಸಾರ್ವಜನಿಕರ ಹಣ, ಸಮಯ ಹಾಳಾಗಬಾರದು ಎಂದು ಗ್ರಾಪಂ ವ್ಯಾಪ್ತಿಗಳಲ್ಲಿ ಗ್ರಾಮ ಆಡಳಿತಾಧಿಕಾರಿ ಕಚೇರಿ ತೆರೆದಿದೆ. ಆದರೆ, ಕಳೆದೊಂದು ವಾರದಿಂದ ಆಡಳಿತಾಧಿಕಾರಿ ಕಚೇರಿಗೆ ಬರುತ್ತಿಲ್ಲ. ಇದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಮೇಲಧಿಕಾರಿಗಳಿಗೆ ಪ್ರಶ್ನಿಸಿದರೆ, ಆಡಳಿತಾಧಿಕಾರಿ ಫಿಲ್ಡ್ ಕೆಲಸಕ್ಕೆ ಹೋಗಿದ್ದಾರೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಇದರಿಂದ ಜನರಿಗೆ ಸರ್ಕಾರದಿಂದ ಸಿಗುವ ಯಾವ ಸೇವೆಗಳು ದೊರೆಯುತ್ತಿಲ್ಲ ಎಂದರು.

ಗ್ರಾಮದಲ್ಲಿ ಮಳೆಯಿಂದ ಸಾಕಷ್ಟು ಮನೆಗಳು ಬಿದ್ದಿದೆ. ಪ್ರಕೃತಿ ವಿಕೋಪದಡಿ ವರದಿ ತಯಾರಿಸಿ ಮೇಲಿನ ಅಧಿಕಾರಿಗಳಿಗೆ ಸಲ್ಲಿಸಿಲ್ಲ. ಮನೆ ಬಿದ್ದಿರುವ ಕುರಿತು ಅರ್ಜಿ ನೀಡಲು ಕಚೇರಿಗೆ ಬಂದರೆ ಯಾವ ಅಧಿಕಾರಿಯೂ ಇರುವುದಿಲ್ಲ ಎಂದು ಆರೋಪಿಸಿದರು.

ಪ್ರತಿನಿತ್ಯ ಜನರು ಬೆಳಗ್ಗೆ 10 ಗಂಟೆ ಕಚೇರಿ ಬಳಿ ಬಂದು ಸಂಜೆವರೆಗೆ ಕಾದು ವಾಪಾಸ್ ಹೋಗುತ್ತಿದ್ದಾರೆ ಎಂದರು.

ಈ ಕುರಿತು ತಹಸೀಲ್ದಾರ್ ರುಕ್ಮಿಣಿಬಾಯಿ ಬಾಯಿ ಮಾತನಾಡಿ, ನಲ್ಲೂರು ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ನೇಮಕ ಮಾಡಿರುವ ಅಧಿಕಾರಿ ರಜೆ ಹೋಗಿದ್ದಾರೆ. ಅವರ ಬದಲಿಗೆ ಬೇರೆಯವರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಜನರ ಸಮಸ್ಯೆ ಬಗೆಹರಿಸಲು ಕಚೇರಿಗೆ ಹೋಗಲೇಬೇಕು. ಈ ಕುರಿತು ವಿಚಾರಣೆ ಮಾಡಿ ತಪ್ಪು ಮಾಡಿದವರ ವಿರುದ್ಧ್ದ ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದರು.
ನಲ್ಲೂರು ಗ್ರಾಮದ ಅಹ್ಮದ್‌ಖಾನ್, ಜಬೀವುಲ್ಲಾಖಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net